S Shorts

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕಾಂಗ್ರೆಸ್‌ನ ಹಿರಿಯ ಶಾಸಕರ ಅಸಮಾಧಾನ: ಶಾಸಕ ಶಾಂತನಗೌಡ ಸಭೆ, ಯಶವಂತರಾಯ ಗೌಡ ಪಾಟೀಲ್ ರಾಜೀನಾಮೆ ಹಠ!

ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕಾಂಗ್ರೆಸ್‌ನ ಹಿರಿಯ ಶಾಸಕರ ಅಸಮಾಧಾನ: ಶಾಸಕ ಶಾಂತನಗೌಡ ಸಭೆ, ಯಶವಂತರಾಯ ಗೌಡ ಪಾಟೀಲ್ ರಾಜೀನಾಮೆ ಹಠ!
Author: Sagaradventure
Posted By: Sagaradventure
Updated: Aug 4, 2026 | 11:06 AM

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಕಾಂಕ್ಷಿ ಶಾಸಕರಲ್ಲಿ ಅಸಮಾಧಾನದ ಬೆಂಕಿ ತೀವ್ರಗೊಂಡಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಬೇಸರಗೊಂಡಿರುವ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ್ ಸೇರಿದಂತೆ ಹಲವು ಹಿರಿಯ ನಾಯಕರು ಪಕ್ಷದ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.

ಹೊನ್ನಾಳಿಯಲ್ಲಿ ಕಾರ್ಯಕರ್ತರ ಸಭೆ ಕರೆದ ಶಾಂತನಗೌಡ

ಸಚಿವ ಸ್ಥಾನ ಮಿಸ್ ಆದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಅವರು ಇಂದು ಹೊನ್ನಾಳಿಯಲ್ಲಿ ತಮ್ಮ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರ ತುರ್ತು ಸಭೆ ಕರೆದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದರ ಕುರಿತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಿದ್ದು, ಸಭೆಯ ನಂತರ ತಮ್ಮ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಯಶವಂತರಾಯ ಗೌಡ ಪಾಟೀಲ್ ಮನವೊಲಿಕೆಗೆ ಸುರ್ಜೇವಾಲ ವಿಫಲ!

ಇತ್ತ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ್ ಕೊನೆ ಗಳಿಗೆಯಲ್ಲಿ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದಕ್ಕೆ ಆಕ್ರೋಶಗೊಂಡು ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಿನ್ನೆ ರಾತ್ರಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಪಾಟೀಲ್ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿ ಮನವೊಲಿಸಲು ಯತ್ನಿಸಿದರೂ ಅದು ವಿಫಲವಾಗಿದೆ. “ನಾನು ಗೆಲ್ಲಬೇಕು ಇಲ್ಲವೇ ಅವರು ಗೆಲ್ಲಬೇಕು” ಎಂದು ಹಠಕ್ಕೆ ಬಿದ್ದಿರುವ ಪಾಟೀಲ್ ಅವರು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ.

ಸಂಪುಟ ವಿಸ್ತರಣೆಯ ನಂತರ ಹಿರಿಯ ನಾಯಕರ ಈ ಬಂಡಾಯದ ನಡೆ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.