S Shorts

AI ಕೌಶಲ್ಯ: ಬೆಂಗಳೂರಿನಲ್ಲಿ ‘ಪ್ರಾಜೆಕ್ಟ್ ಹೆಲಿಕ್ಸ್’ ಅನಾವರಣಗೊಳಿಸಿದ ಕೋರ್ಸೆರಾ, ಐಐಎಂ-ಬಿ ಜೊತೆ ಮಹತ್ವದ ಒಪ್ಪಂದ!

AI ಕೌಶಲ್ಯ: ಬೆಂಗಳೂರಿನಲ್ಲಿ ‘ಪ್ರಾಜೆಕ್ಟ್ ಹೆಲಿಕ್ಸ್’ ಅನಾವರಣಗೊಳಿಸಿದ ಕೋರ್ಸೆರಾ, ಐಐಎಂ-ಬಿ ಜೊತೆ ಮಹತ್ವದ ಒಪ್ಪಂದ!
Author: Sagaradventure
Posted By: Sagaradventure
Updated: Oct 16, 2026 | 9:24 PM

ಬೆಂಗಳೂರು: ಭವಿಷ್ಯದ ಉದ್ಯೋಗ ಮಾರುಕಟ್ಟೆಗೆ ತಕ್ಕಂತೆ ಕೃತಕ ಬುದ್ಧಿಮತ್ತೆ (AI) ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಜಾಗತಿಕ ಆನ್‌ಲೈನ್ ಕಲಿಕಾ ವೇದಿಕೆಯಾದ ‘ಕೋರ್ಸೆರಾ’ (Coursera), ತನ್ನ ಹೊಸ ಎಐ-ಆಧಾರಿತ ಸ್ಕಿಲ್ಸ್ ಪ್ಲಾಟ್‌ಫಾರ್ಮ್ ‘ಪ್ರಾಜೆಕ್ಟ್ ಹೆಲಿಕ್ಸ್’ (Project Helix) ಅನ್ನು ಗುರುವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ.

ಕೋರ್ಸೆರಾ ಮತ್ತು ಇತ್ತೀಚೆಗಷ್ಟೇ ಅದರೊಂದಿಗೆ ವಿಲೀನವಾಗಿರುವ ಮತ್ತೊಂದು ದಿಗ್ಗಜ ಸಂಸ್ಥೆ ‘ಉಡೆಮಿ’ (Udemy) ಜಂಟಿಯಾಗಿ ಆಯೋಜಿಸಿದ್ದ ‘ಎಫ್‌ಡಬ್ಲ್ಯೂಡಿ 2026’ (FWD 2026) ವಾರ್ಷಿಕ ಕಾರ್ಯಕ್ರಮದಲ್ಲಿ ಈ ನೂತನ ವೇದಿಕೆಯನ್ನು ಅಧಿಕೃತವಾಗಿ ಪ್ರದರ್ಶಿಸಲಾಯಿತು.

ಏನಿದು ‘ಪ್ರಾಜೆಕ್ಟ್ ಹೆಲಿಕ್ಸ್’?

ವ್ಯವಹಾರದ ಅಗತ್ಯಗಳಿಗೆ ತಕ್ಕಂತೆ ಉದ್ಯೋಗಿಗಳಿಗೆ ವೈಯಕ್ತಿಕ ಕಲಿಕೆ ಮತ್ತು ಕೌಶಲ್ಯಗಳನ್ನು ಒದಗಿಸಲು ಈ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದೆ. ಕಲಿಯುವವರು ತಮ್ಮ ಗುರಿಗಳನ್ನು ಸಾಮಾನ್ಯ ಭಾಷೆಯಲ್ಲಿ ವಿವರಿಸಿದರೆ, ಅದಕ್ಕೆ ತಕ್ಕಂತೆ ‘ಎಐ’ ಕಲಿಕಾ ಮಾರ್ಗವನ್ನು ಇದು ತಾನಾಗಿಯೇ ರೂಪಿಸಿಕೊಡುತ್ತದೆ. 2027ರ ಮೊದಲಾರ್ಧದಲ್ಲಿ ಈ ವೇದಿಕೆ ಉದ್ಯಮ-ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ. “ದೈನಂದಿನ ಕೆಲಸಗಳಲ್ಲಿ ಕಲಿಕೆಯನ್ನು ಅಳವಡಿಸಿಕೊಳ್ಳಲು ಹಾಗೂ ಉದ್ಯೋಗಿಗಳಿಗೆ ಸೂಕ್ತ ಕೌಶಲ್ಯದ ವಿಶ್ವಾಸ ತುಂಬಲು ಇದು ನೆರವಾಗಲಿದೆ,” ಎಂದು ಕೋರ್ಸೆರಾದ ಏಷ್ಯಾ-ಪೆಸಿಫಿಕ್ ಎಂಡಿ ಆಶುತೋಷ್ ಗುಪ್ತಾ ತಿಳಿಸಿದ್ದಾರೆ.

ಐಐಎಂ-ಬೆಂಗಳೂರು ಜೊತೆ ಒಪ್ಪಂದ:

ಮ್ಯಾನೇಜ್‌ಮೆಂಟ್‌ ಶಿಕ್ಷಣವನ್ನು ಜಾಗತಿಕ ಮಟ್ಟದ ವಿದ್ಯಾರ್ಥಿಗಳಿಗೆ ವಿಸ್ತರಿಸುವ ನಿಟ್ಟಿನಲ್ಲಿ ಕೋರ್ಸೆರಾ, ಐಐಎಂ ಬೆಂಗಳೂರಿನ ‘ಐಐಎಂಬಿಎಕ್ಸ್ ಡಿಜಿಟಲ್ ಲರ್ನಿಂಗ್ ಫೌಂಡೇಶನ್’ (IIMBx) ಜೊತೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಬಿಸಿನೆಸ್ ಸ್ಟ್ರಾಟಜಿ, ಉದ್ಯಮಶೀಲತೆ, ಡೇಟಾ ಆಧಾರಿತ ನಿರ್ಧಾರ, ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಫಿನ್‌ಟೆಕ್‌ನಂತಹ ಹೊಸ ಕೋರ್ಸ್‌ಗಳನ್ನು ಕೋರ್ಸೆರಾ ವೇದಿಕೆಯಲ್ಲಿ ಆರಂಭಿಸಲಾಗುವುದು ಎಂದು ಐಐಎಂಬಿಎಕ್ಸ್‌ನ ಸಿಇಒ ಸೀತಾರಾಮನ್ ಶಂಕರ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಎಐ ಕ್ರೇಜ್:

ಕೌಶಲ್ಯಾಭಿವೃದ್ಧಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ರಾಜ್ಯದಲ್ಲಿ ಬರೋಬ್ಬರಿ 43 ಲಕ್ಷ ಕೋರ್ಸೆರಾ ಬಳಕೆದಾರರಿದ್ದಾರೆ. ವಿಶೇಷವೆಂದರೆ, ರಾಜ್ಯದಲ್ಲಿ ಸರಾಸರಿ ಪ್ರತಿ 2 ನಿಮಿಷಕ್ಕೊಮ್ಮೆ ಒಬ್ಬರು ‘ಜನರೇಟಿವ್ ಎಐ’ ಕೋರ್ಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ. ಇದುವರೆಗೆ 7.5 ಲಕ್ಷ ಮಂದಿ ಎಐ ಕೋರ್ಸ್‌ಗೆ ನೋಂದಾಯಿಸಿಕೊಂಡಿದ್ದಾರೆ. ರಾಜ್ಯದ ರೇವಾ, ಕ್ರೈಸ್ಟ್, ಅಲಯನ್ಸ್, ಮೈಸೂರಿನ ಎನ್‌ಐಇ ಸೇರಿದಂತೆ ಹಲವು ಪ್ರಮುಖ ವಿಶ್ವವಿದ್ಯಾಲಯಗಳೊಂದಿಗೂ ಕೋರ್ಸೆರಾ ಶೈಕ್ಷಣಿಕ ಪಾಲುದಾರಿಕೆ ಹೊಂದಿದೆ.

2012ರಲ್ಲಿ ಆರಂಭವಾದ ‘ಕೋರ್ಸೆರಾ’, ಇತ್ತೀಚೆಗಷ್ಟೇ ‘ಉಡೆಮಿ’ ಜೊತೆ ವಿಲೀನಗೊಳ್ಳುವ ಮೂಲಕ ವಿಶ್ವಾದ್ಯಂತ 30 ಕೋಟಿಗೂ ಅಧಿಕ ವಿದ್ಯಾರ್ಥಿಗಳನ್ನು ಹಾಗೂ 12,000ಕ್ಕೂ ಹೆಚ್ಚು ಉದ್ಯಮ-ಗ್ರಾಹಕರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಸ್ಕಿಲ್ ಡೆವಲಪ್ಮೆಂಟ್ ವೇದಿಕೆಯಾಗಿ ಹೊರಹೊಮ್ಮಿದೆ.