S Shorts

Davangere ಉಪಚುನಾವಣೆ ಎಫೆಕ್ಟ್: ನಸೀರ್ ಅಹ್ಮದ್ ವಜಾ, ಸಚಿವ ಸಂಪುಟ ಪುನಾರಚನೆ ಸುಳಿವು ನೀಡಿದ ಕಾಂಗ್ರೆಸ್ ಹೈಕಮಾಂಡ್!

Davangere ಉಪಚುನಾವಣೆ ಎಫೆಕ್ಟ್: ನಸೀರ್ ಅಹ್ಮದ್ ವಜಾ, ಸಚಿವ ಸಂಪುಟ ಪುನಾರಚನೆ ಸುಳಿವು ನೀಡಿದ ಕಾಂಗ್ರೆಸ್ ಹೈಕಮಾಂಡ್!
Author: Sagaradventure
Posted By: Sagaradventure
Updated: Apr 14, 2026 | 4:15 PM

ಬೆಂಗಳೂರು: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿನ ಟಿಕೆಟ್ ಹಂಚಿಕೆಯ ಭಿನ್ನಮತ ಇದೀಗ ರಾಜ್ಯ ಕಾಂಗ್ರೆಸ್ ನಾಯಕರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಹೈಕಮಾಂಡ್ ಮತ್ತೊಂದು ಕಠಿಣ ಕ್ರಮ ಕೈಗೊಂಡಿದೆ. ಸ್ವತಃ ಹೈಕಮಾಂಡ್ ಸೂಚನೆ ನೀಡಿದರೂ ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರನ್ನು ಹುದ್ದೆಯಿಂದ ದಿಢೀರ್ ಆಗಿ ಬಿಡುಗಡೆಗೊಳಿಸುವ ಮೂಲಕ ಕಾಂಗ್ರೆಸ್ ವರಿಷ್ಠರು ತಲೆದಂಡದ ರುಚಿ ತೋರಿಸಿದ್ದಾರೆ. ಉಪಚುನಾವಣೆ ಫಲಿತಾಂಶ ಬರುವ ಮುನ್ನವೇ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಈ ಕ್ಷಿಪ್ರ ಬೆಳವಣಿಗೆಗಳು ತೀವ್ರ ಕುತೂಹಲಕ್ಕೆ ಕಾರಣವಾಗಿವೆ.

ಟಿಕೆಟ್ ಸಿಗದ್ದಕ್ಕೆ ರೊಚ್ಚಿಗೆದ್ದಿದ್ದ ಅಲ್ಪಸಂಖ್ಯಾತ ಮುಖಂಡರು

ದಾವಣಗೆರೆ ದಕ್ಷಿಣ ಉಪಚುನಾವಣೆ ಘೋಷಣೆಯಾದ ದಿನದಿಂದಲೇ ಕಾಂಗ್ರೆಸ್ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಹಾಗೂ ಅಲ್ಪಸಂಖ್ಯಾತ ನಾಯಕ ಸಾಧಿಕ್ ಪೈಲ್ವಾನ್ ನಡುವೆ ಭಾರೀ ಜಿದ್ದಾಜಿದ್ದಿ ಇತ್ತು. ಆದರೆ, ಕೊನೆ ಕ್ಷಣದಲ್ಲಿ ಟಿಕೆಟ್ ಸಮರ್ಥ್ ಪಾಲಾಗಿದ್ದರಿಂದ ಅಲ್ಪಸಂಖ್ಯಾತ ಮುಖಂಡರು ರೊಚ್ಚಿಗೆದ್ದಿದ್ದರು. ಆಕ್ರೋಶಗೊಂಡ ಸಾಧಿಕ್ ಪೈಲ್ವಾನ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನೂ ಸಲ್ಲಿಸಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ಅವರನ್ನು ಸಮಾಧಾನಪಡಿಸಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರೂ, ಅಲ್ಪಸಂಖ್ಯಾತರ ಒಳಗಿನ ಅಸಮಾಧಾನ ಸಂಪೂರ್ಣವಾಗಿ ತಣ್ಣಗಾಗಿರಲಿಲ್ಲ ಎಂಬುದು ಚುನಾವಣಾ ಪ್ರಚಾರದ ವೇಳೆ ಸ್ಪಷ್ಟವಾಗಿತ್ತು. ಈ ಬೇಗುದಿಯ ಪರಿಣಾಮವೇ ಜಬ್ಬಾರ್ ರಾಜೀನಾಮೆ ಹಾಗೂ ನಸೀರ್ ಅಹ್ಮದ್ ಅವರ ವಜಾಕ್ಕೆ ಕಾರಣವಾಗಿದೆ.

ಸಚಿವ ಜಮೀರ್ ಸಮರ್ಥನೆ ಏನು?

ಅಲ್ಪಸಂಖ್ಯಾತ ನಾಯಕರ ಈ ಅಸಮಾಧಾನದ ಕುರಿತು ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ದಾವಣಗೆರೆ ಟಿಕೆಟ್ ವಿಚಾರದಲ್ಲಿ ಮೊದಲು ಜಬ್ಬಾರ್ ಅವರಿಗೆ ಟಿಕೆಟ್ ಕೇಳಿದ್ದು ನಿಜ, ಆದರೆ ಅವರು ಎಂಎಲ್‌ಸಿ ಆಗಿದ್ದರಿಂದ ಕೈಬಿಟ್ಟು ಇನ್ನುಳಿದ 7 ಮುಸ್ಲಿಂ ನಾಯಕರಲ್ಲಿ ಒಬ್ಬರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಲಾಗಿತ್ತು, ಆದರೆ ಅದು ಈಡೇರಲಿಲ್ಲ. ಜೊತೆಗೆ ಸಂವಹನದ ಕೊರತೆ ಹಾಗೂ ಅಭ್ಯರ್ಥಿ ಸಮರ್ಥ್ ಅವರ ತಂದೆ ಎಸ್.ಎಸ್ ಮಲ್ಲಿಕಾರ್ಜುನ ಅವರು ಪಕ್ಕದ ಮನೆಗೇ ಬಂದರೂ ತಮ್ಮ ಮನೆಗೆ ಭೇಟಿ ನೀಡಿರಲಿಲ್ಲ ಎಂಬ ಬೇಸರ ಹಾಗೂ ಅನಾರೋಗ್ಯದ ಕಾರಣದಿಂದ ಜಬ್ಬಾರ್ ಪ್ರಚಾರಕ್ಕೆ ಹೋಗದೆ ಮನೆಯಲ್ಲೇ ಉಳಿದಿದ್ದರು ಎಂದಿದ್ದಾರೆ. ಇನ್ನು ನಸೀರ್ ಅಹ್ಮದ್ ಅವರಿಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಬಾಗಲಕೋಟೆ ಉಪಚುನಾವಣೆಯ ಸಂಪೂರ್ಣ ಜವಾಬ್ದಾರಿ ವಹಿಸಿ 10 ದಿನಗಳ ಕಾಲ ಅಲ್ಲೇ ಉಳಿಯಲು ಸೂಚಿಸಿದ್ದರಿಂದ ಅವರು ದಾವಣಗೆರೆಗೆ ಬರಲು ಸಾಧ್ಯವಾಗಲಿಲ್ಲ ಎಂದು ಜಮೀರ್ ಸಮರ್ಥಿಸಿಕೊಂಡಿದ್ದಾರೆ.

ಆಪ್ತ ಸಚಿವರಿಗೆ ಸಿಎಂ ಬುಲಾವ್!

ಒಂದೆಡೆ ನಸೀರ್ ಅಹ್ಮದ್ ಅವರ ತಲೆದಂಡವಾಗುತ್ತಿದ್ದಂತೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರಿಗೆ ತುರ್ತು ಬುಲಾವ್ ನೀಡಿದ್ದಾರೆ. ಸಚಿವರಾದ ಹೆಚ್.ಸಿ. ಮಹದೇವಪ್ಪ, ಭೈರತಿ ಸುರೇಶ್ ಹಾಗೂ ಪ್ರಿಯಾಂಕ್ ಖರ್ಗೆ ಅವರು ಸಿಎಂ ನಿವಾಸ ‘ಕಾವೇರಿ’ಗೆ ದೌಡಾಯಿಸಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಸಚಿವ ಜಮೀರ್ ಅಹ್ಮದ್ ಕೂಡ ಸಿಎಂ ಭೇಟಿಯಾಗಿ ಚರ್ಚಿಸಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಆರ್ ಸಿ ಬಿ ವಿಜಯೋತ್ಸವದ ಕಾಲ್ತುಳಿತದ ವೇಳೆ ಆಗಿನ ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರನ್ನು ವಜಾಗೊಳಿಸಲಾಗಿತ್ತು. ಇದೀಗ ಆ ಸರದಿ ನಸೀರ್ ಅಹ್ಮದ್ ಅವರದ್ದಾಗಿದೆ. 

ಸದ್ಯದ ಈ ರಾಜೀನಾಮೆ ಹಾಗೂ ವಜಾ ಪರ್ವವು ಕೇವಲ ಆರಂಭವಷ್ಟೇ ಆಗಿದ್ದು, ಹೈಕಮಾಂಡ್‌ನ ಈ ಕಠಿಣ ನಡೆಯು ಶೀಘ್ರದಲ್ಲೇ ನಡೆಯಲಿರುವ ಬೃಹತ್ ಸಚಿವ ಸಂಪುಟ ಪುನಾರಚನೆಗೆ ಹಾಕಿಕೊಟ್ಟಿರುವ ಸ್ಪಷ್ಟ ಮುನ್ನುಡಿ ಎಂದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.