ಲೋಕಸಭಾ ಸ್ಥಾನಗಳನ್ನು ವಿಸ್ತರಿಸುವ ಹಾಗೂ ಮಹಿಳಾ ಮೀಸಲಾತಿ ಒದಗಿಸುವ ಮಹತ್ವದ ಸಂವಿಧಾನ ತಿದ್ದುಪಡಿ ಮಸೂದೆಯ ವಿರುದ್ಧ ವಿರೋಧ ಪಕ್ಷಗಳು ಮತ ಚಲಾಯಿಸಿರುವುದನ್ನು ‘ಹೆಣ್ಣು ಭ್ರೂಣ ಹತ್ಯೆ’ಗೆ ಹೋಲಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮಹಿಳೆಯರಿಗೆ ಅವರ ಹಕ್ಕುಗಳನ್ನು ಒದಗಿಸುವ ಸರ್ಕಾರದ ಪ್ರಯತ್ನ ನಿರಂತರವಾಗಿ ಮುಂದುವರಿಯಲಿದೆ ಎಂದು ಶನಿವಾರ ಶಪಥ ಮಾಡಿದ್ದಾರೆ. ರಾಷ್ಟ್ರವನ್ನುದ್ದೇಶಿಸಿ 30 ನಿಮಿಷಗಳ ಕಾಲ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವನ್ನು ಪ್ರಾದೇಶಿಕ ಪಕ್ಷಗಳ ಮೇಲಿನ ಪರಾವಲಂಬಿ ಎಂದು ಜರಿದರು. ತಮ್ಮ ಸ್ವಾರ್ಥ ರಾಜಕಾರಣ ಹಾಗೂ ಅಭದ್ರತೆಯ ಕಾರಣದಿಂದಾಗಿ ಕಾಂಗ್ರೆಸ್ ಯಾವುದೇ ರೀತಿಯ ಸುಧಾರಣೆಗಳನ್ನು ವಿರೋಧಿಸುತ್ತಿದೆ ಎಂದು ಆರೋಪಿಸಿದರು. ನಾರಿ ಶಕ್ತಿ ವಂದನ್ ಅಧಿನಿಯಮದ ತಿದ್ದುಪಡಿಗಳನ್ನು ತಡೆಯಲು ನೆರವಾದ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ತೃಣಮೂಲ ಕಾಂಗ್ರೆಸ್ ಹಾಗೂ ಡಿಎಂಕೆ ಎಂಬ 4 ಪ್ರಮುಖ ವಿರೋಧ ಪಕ್ಷಗಳು ಮುಂಬರುವ ದಿನಗಳಲ್ಲಿ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳಿಂದ ಗರ್ಭಪಾತ
ಈ ಮಸೂದೆಯನ್ನು ಅತ್ಯಂತ ಪ್ರಾಮಾಣಿಕತೆ ಮತ್ತು ಸತ್ಭಾವನೆಯಿಂದ ತರಲಾಗಿತ್ತು. ಇದು ದೇಶದ ಪ್ರಗತಿಯಲ್ಲಿ ಮಹಿಳೆಯರನ್ನು ಸಹ-ಪ್ರಯಾಣಿಕರನ್ನಾಗಿ ಮಾಡುವ ಒಂದು ಪವಿತ್ರ ಪ್ರಯತ್ನವಾಗಿತ್ತು. ಯಾವುದೇ ರಾಜ್ಯದ ಗಾತ್ರ ಮತ್ತು ಜನಸಂಖ್ಯೆಯನ್ನು ಲೆಕ್ಕಿಸದೆ ಸಂಸತ್ತಿನಲ್ಲಿ ಪ್ರತಿಯೊಂದು ರಾಜ್ಯದ ಧ್ವನಿಯನ್ನು ಬಲಪಡಿಸುವ ಉದ್ದೇಶವನ್ನು ಇದು ಹೊಂದಿತ್ತು. ಆದರೆ, ಈ ಪ್ರಾಮಾಣಿಕ ಉದ್ದೇಶವನ್ನು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಗರ್ಭಪಾತ ಮಾಡಿವೆ. ಈ ಭ್ರೂಣ ಹತ್ಯೆಗೆ ಪ್ರಮುಖವಾಗಿ ಈ 4 ಪಕ್ಷಗಳೇ ನೇರ ಹೊಣೆಗಾರರು ಎಂದು ಪ್ರಧಾನಿ ಆಕ್ರೋಶ ವ್ಯಕ್ತಪಡಿಸಿದರು.
2029 ರ ಚುನಾವಣೆಗಳ ಹೊತ್ತಿಗೆ ಲೋಕಸಭಾ ಸ್ಥಾನಗಳ ಮಿತಿಯನ್ನು 850 ಕ್ಕೆ ಹೆಚ್ಚಿಸುವ ಮತ್ತು ಮಹಿಳೆಯರಿಗೆ 33% ಮೀಸಲಾತಿಯನ್ನು ಜಾರಿಗೆ ತರುವ ಗುರಿ ಹೊಂದಿದ್ದ 131 ನೇ ಸಂವಿಧಾನ ತಿದ್ದುಪಡಿ ಮಸೂದೆಯು ಸಂಸತ್ತಿನಲ್ಲಿ ವಿಫಲವಾದ ಒಂದು ದಿನದ ನಂತರ ಪ್ರಧಾನಿಯವರ ಈ ಭಾಷಣ ಹೊರಬಂದಿದೆ. ಎಲ್ಲಾ ರಾಜ್ಯಗಳಿಗೂ 50% ಅನುಪಾತದ ಹೆಚ್ಚಳವನ್ನು ಮಸೂದೆಯಲ್ಲಿ ಸೇರಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೊನೆಯ ಕ್ಷಣದಲ್ಲಿ ನಾಟಕೀಯ ಆಫರ್ ನೀಡಿದ್ದರೂ ಸಹ, ಒಗ್ಗಟ್ಟಿನ ವಿರೋಧ ಪಕ್ಷಗಳು ಮಸೂದೆಯ ವಿರುದ್ಧವೇ ನಿಂತ ಪರಿಣಾಮ ಇದು ಸೋಲುಕಂಡಿತ್ತು.
ಮಸೂದೆಯಲ್ಲಿ ಸೇರಿಸದ ಭರವಸೆಗಳಿಂದ ವಿವಾದ
ಲೋಕಸಭೆ ಮತ್ತು ರಾಜ್ಯ ಅಸೆಂಬ್ಲಿಗಳಲ್ಲಿನ ಒಟ್ಟಾರೆ ಸ್ಥಾನಗಳನ್ನು 50% ರಷ್ಟು ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿತ್ತು ಹಾಗೂ ಸಂಸತ್ತಿನಲ್ಲಿ ರಾಜ್ಯಗಳ ಪ್ರಾತಿನಿಧ್ಯದ ಅನುಪಾತವನ್ನು ಬದಲಾಯಿಸಲಾಗುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ ಈ ಭರವಸೆಯನ್ನು ಮಸೂದೆಗಳಲ್ಲಿ ಲಿಖಿತ ರೂಪದಲ್ಲಿ ಸೇರಿಸದ ಕಾರಣ, ಇದು ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಪ್ರಮುಖ ವಿವಾದಕ್ಕೆ ಕಾರಣವಾಯಿತು.
2011 ರ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳ ಮರುವಿಂಗಡಣೆ ಮಾಡಲು ಮಹಿಳಾ ಮೀಸಲಾತಿಯನ್ನು ಕೇವಲ ಒಂದು ನೆಪವಾಗಿ ಬಳಸಿಕೊಳ್ಳಲು ಸರ್ಕಾರ ಯತ್ನಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಮಹಿಳೆಯರಿಗೆ ಅವರ ಹಕ್ಕುಗಳನ್ನು ನಿರಾಕರಿಸಲು ವಿರೋಧ ಪಕ್ಷಗಳು ನೀಡುತ್ತಿರುವ ಕಾರಣಗಳನ್ನು ಕೇವಲ ‘ನೆಪಗಳು’ ಎಂದು ತಮ್ಮ ಭಾಷಣದಲ್ಲಿ ಪ್ರಧಾನಿ ಬಣ್ಣಿಸಿದರು. ಮಹಿಳಾ ಸಬಲೀಕರಣದ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ ಅವರು, ತಮ್ಮ ಸ್ವಂತ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಈ 4 ವಂಶಪಾರಂಪರಿಕ ಪಕ್ಷಗಳು ಒಂದಾಗಿವೆ ಎಂದು ದೂರಿದರು.
ಮಹಿಳೆಯರ ಸ್ವಾಭಿಮಾನದ ಮೇಲಿನ ಪ್ರಹಾರ
ನಮಗೆ ರಾಷ್ಟ್ರದ ಹಿತಾಸಕ್ತಿಯೇ ಸರ್ವಸ್ವ. ಆದರೆ ಕೆಲವರಿಗೆ ಪಕ್ಷದ ಹಿತಾಸಕ್ತಿಯೇ ಎಲ್ಲವೂ ಆದಾಗ, ಅದು ರಾಷ್ಟ್ರದ ಹಿತಾಸಕ್ತಿಯನ್ನೇ ಮರೆಮಾಚುತ್ತದೆ. ಈ ಬಾರಿಯೂ ನಿಖರವಾಗಿ ಅದೇ ಸಂಭವಿಸಿದೆ. ಕಾಂಗ್ರೆಸ್, ಡಿಎಂಕೆ, ಟಿಎಂಸಿ ಮತ್ತು ಸಮಾಜವಾದಿ ಪಕ್ಷದ ಈ ಸ್ವಾರ್ಥ ರಾಜಕಾರಣದ ಬಿಸಿಯನ್ನು ದೇಶದ ಮಹಿಳೆಯರು ಅನುಭವಿಸಬೇಕಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಶುಕ್ರವಾರ ಸಂಸತ್ತಿನಲ್ಲಿ ನಡೆದ ಬೆಳವಣಿಗೆಗಳನ್ನು ಲಕ್ಷಾಂತರ ಮಹಿಳೆಯರು ವೀಕ್ಷಿಸುತ್ತಿದ್ದರು. ಮಹಿಳೆಯರ ಹಿತಾಸಕ್ತಿಯನ್ನು ಕಾಪಾಡುವ ಮಸೂದೆ ಅಂಗೀಕಾರವಾಗದಿದ್ದಾಗ ಈ ವಂಶಪಾರಂಪರಿಕ ಪಕ್ಷಗಳು ಸಂಭ್ರಮಿಸುತ್ತಿದ್ದನ್ನು ನೋಡಿ ನನಗೆ ತೀವ್ರ ದುಃಖವಾಯಿತು. ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡ ನಂತರ ಅವರು ಮೇಜು ಕುಟ್ಟಿ ಸಂಭ್ರಮಿಸಿದ್ದು ಕೇವಲ ವಿಜಯೋತ್ಸವವಲ್ಲ, ಬದಲಾಗಿ ಅದು ಮಹಿಳೆಯರ ಸ್ವಾಭಿಮಾನದ ಮೇಲಿನ ಪ್ರಹಾರವಾಗಿತ್ತು ಎಂದು ಪ್ರಧಾನಿ ಹೇಳಿದರು.
ವಿರೋಧ ಪಕ್ಷಗಳು ಎಸಗಿರುವ ಪಾಪಕ್ಕೆ ತಕ್ಕ ಶಿಕ್ಷೆ
2023 ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸುವಾಗ ಒಮ್ಮತ ಮೂಡಿಸಿದಂತೆಯೇ ಈ ಬಾರಿಯೂ ಒಮ್ಮತದಿಂದ ತಿದ್ದುಪಡಿಗಳನ್ನು ಅಂಗೀಕರಿಸುವಂತೆ ವಿರೋಧ ಪಕ್ಷಗಳಿಗೆ ಹಲವು ಬಾರಿ ಮನವಿ ಮಾಡಿದ್ದೆ. ಮಸೂದೆ ಅಂಗೀಕಾರಕ್ಕೆ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ಸರ್ಕಾರದ ಬಳಿ ಇಲ್ಲದಿದ್ದರೂ, ಮಹಿಳೆಯರ 100% ಬೆಂಬಲ ಸರ್ಕಾರಕ್ಕಿದೆ. ವಿಪಕ್ಷಗಳು ಮಾಡಿದ ಅಪಮಾನವನ್ನು ಮಹಿಳೆಯರು ಎಂದಿಗೂ ಮರೆಯುವುದಿಲ್ಲ ಎಂದು ಮೋದಿ ಗುಡುಗಿದರು. ವಿರೋಧ ಪಕ್ಷಗಳು ಮಹಿಳೆಯರನ್ನು ಹಗುರವಾಗಿ ಪರಿಗಣಿಸಿವೆ ಎಂದು ಆರೋಪಿಸಿದ ಪ್ರಧಾನಿ, 21 ನೇ ಶತಮಾನದ ಮಹಿಳೆಯರು ಪ್ರತಿಯೊಂದು ಬೆಳವಣಿಗೆಯ ಮೇಲೂ ಕಣ್ಣಿಟ್ಟಿರುತ್ತಾರೆ ಎಂಬುದನ್ನು ಅವರು ಮರೆತಿದ್ದಾರೆ. ಮಹಿಳೆಯರು ಈಗ ವಿಪಕ್ಷಗಳ ನೈಜ ಉದ್ದೇಶಗಳನ್ನು ಅರಿತುಕೊಂಡಿದ್ದಾರೆ ಮತ್ತು ಸತ್ಯದ ಸಂಪೂರ್ಣ ಅರಿವು ಅವರಿಗಿದೆ. ಆದ್ದರಿಂದ, ಮಹಿಳಾ ಮೀಸಲಾತಿಯನ್ನು ವಿರೋಧಿಸುವ ಮೂಲಕ ವಿರೋಧ ಪಕ್ಷಗಳು ಎಸಗಿರುವ ಪಾಪಕ್ಕೆ ಅವರಿಗೆ ಖಂಡಿತವಾಗಿಯೂ ತಕ್ಕ ಶಿಕ್ಷೆಯಾಗಲಿದೆ ಎಂದು ಎಚ್ಚರಿಸಿದರು.
ಸರ್ಕಾರಿ ಮಸೂದೆ ಪರಾಭವಗೊಂಡ ಮೊದಲ ನಿದರ್ಶನ
ಶುಕ್ರವಾರ ಮಸೂದೆ ಸೋಲುಕಂಡಿರುವುದು 2014 ರ ನಂತರ ಸದನದಲ್ಲಿ ಸರ್ಕಾರಿ ಮಸೂದೆಯೊಂದು ಪರಾಭವಗೊಂಡ ಮೊದಲ ನಿದರ್ಶನವಾಗಿದೆ. ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುವ ದಕ್ಷಿಣದ 5 ರಾಜ್ಯಗಳ ಹಕ್ಕುಗಳ ಮೇಲೆ ಈ ಮಸೂದೆಗಳು ಪರಿಣಾಮ ಬೀರುತ್ತಿದ್ದವು ಎಂಬ ವಿಪಕ್ಷಗಳ ಆರೋಪವನ್ನು ಪ್ರಧಾನಿ ಮೋದಿ ಸಾರಾಸಗಟಾಗಿ ತಳ್ಳಿಹಾಕಿದರು. ಎಲ್ಲಾ ಪ್ರದೇಶಗಳ ರಾಜ್ಯಗಳಿಗೆ ಹೆಚ್ಚಿನ ಸ್ಥಾನಗಳನ್ನು ಸೇರಿಸಲು ಸರ್ಕಾರ ಯೋಜನೆಯನ್ನು ರೂಪಿಸಿತ್ತು ಎಂದು ಅವರು ಸ್ಪಷ್ಟಪಡಿಸಿದರು. ಈ ಮಸೂದೆಯು ಯಾರಿಂದಲೂ ಯಾವುದನ್ನೂ ಕಸಿದುಕೊಳ್ಳುವ ಉದ್ದೇಶ ಹೊಂದಿರಲಿಲ್ಲ, ಬದಲಾಗಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಅನುಕೂಲ ಮಾಡಿಕೊಡಲಿತಿತ್ತು. ಇದು ಕೊಡುವುದಕ್ಕಾಗಿ ತಂದ ತಿದ್ದುಪಡಿಯೇ ಹೊರತು ಕಸಿದುಕೊಳ್ಳುವುದಕ್ಕಾಗಿ ಅಲ್ಲ. ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಸೇರಿದಂತೆ ಎಲ್ಲಾ ಪ್ರದೇಶಗಳಲ್ಲಿ ಸಮತೋಲಿತ ಸಬಲೀಕರಣವನ್ನು ಖಚಿತಪಡಿಸುವ ಹಾಗೂ ಸಂಸತ್ತಿನಲ್ಲಿ ಪ್ರತಿಯೊಂದು ರಾಜ್ಯದ ಧ್ವನಿಯನ್ನು ಬಲಪಡಿಸುವ ಉದ್ದೇಶವನ್ನು ಇದು ಹೊಂದಿತ್ತು ಎಂದರು.
