ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಗೊಂದಲ ಹಾಗೂ ರಾಜಕೀಯ ಬಿರುಗಾಳಿ ಎದ್ದಿದೆ. ಚುನಾವಣಾ ಪ್ರಚಾರದಿಂದ ಅಂತರ ಕಾಯ್ದುಕೊಂಡಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ತೀವ್ರ ಅಸಮಾಧಾನಗೊಂಡಿದ್ದು, ಇದರ ಪರಿಣಾಮವಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ನಜೀರ್ ಅಹಮದ್ ಅವರು ಇಂದು ರಾಜೀನಾಮೆ ನೀಡುವ ಸಾಧ್ಯತೆ ಬಹುತೇಕ ದಟ್ಟವಾಗಿದೆ.
ಪಕ್ಷದ ಪ್ರಮುಖ ಚುನಾವಣಾ ಚಟುವಟಿಕೆಗಳು ಹಾಗೂ ಪ್ರಚಾರ ಕಾರ್ಯಗಳಿಂದ ನಜೀರ್ ಅಹಮದ್ ಉದ್ದೇಶಪೂರ್ವಕವಾಗಿ ದೂರ ಉಳಿದಿದ್ದರು ಎನ್ನಲಾಗಿದೆ. ಈ ನಡೆಯಿಂದ ತೀವ್ರ ಗರಂ ಆಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ತಕ್ಷಣವೇ ಹುದ್ದೆಗೆ ರಾಜೀನಾಮೆ ನೀಡುವಂತೆ ಖಡಕ್ ಸೂಚನೆ ನೀಡಿದ್ದಾರೆ ಎಂಬ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಹೈಕಮಾಂಡ್ ಸೂಚನೆಯ ಬೆನ್ನಲ್ಲೇ ಇಂದು ನಜೀರ್ ಅಹಮದ್ ತಮ್ಮ ಸ್ಥಾನದಿಂದ ಅಧಿಕೃತವಾಗಿ ಕೆಳಗಿಳಿಯುವುದು ಬಹುತೇಕ ಖಚಿತವಾಗಿದೆ.
ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಅಚ್ಚರಿಯ ಸುದ್ದಿ ಹರಿದಾಡುತ್ತಿದೆ. ನಜೀರ್ ಅಹಮದ್ ಅವರ ರಾಜೀನಾಮೆ ಜೊತೆಯಲ್ಲೇ, ಸಚಿವ ಜಮೀರ್ ಅಹ್ಮದ್ ಅವರಿಂದಲೂ ರಾಜೀನಾಮೆ ಪಡೆಯುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ತೀವ್ರವಾಗಿ ಕೇಳಿಬರುತ್ತಿವೆ. ಒಟ್ಟಿನಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಈ ದಿಢೀರ್ ಬೆಳವಣಿಗೆಗಳು ರಾಜ್ಯ ಕಾಂಗ್ರೆಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿವೆ.
