S Shorts

Devanahalli | 9ನೇ ಮಹಡಿ ಏರಿ ಯುವಕನ ಆತ್ಮಹತ್ಯೆ ಬೆದರಿಕೆ; ತಾಯಿ ಕರೆದರೂ ಬಾರದ ಮಗ

Devanahalli | 9ನೇ ಮಹಡಿ ಏರಿ ಯುವಕನ ಆತ್ಮಹತ್ಯೆ ಬೆದರಿಕೆ; ತಾಯಿ ಕರೆದರೂ ಬಾರದ ಮಗ
Author: Meghana Gowda
Posted By: Meghana Gowda
Updated: Apr 21, 2026 | 5:35 PM

ಬೆಂಗಳೂರು ಗ್ರಾಮಾಂತರ: ರಾಜಧಾನಿಯ ಹೊರವಲಯದಲ್ಲಿ ಇಂದು  ಆತಂಕಕಾರಿ ಘಟನೆಯೊಂದು ನಡೆದಿದೆ. ತಿಂದು ಅಡ್ಡಾಡುವ ವಯಸ್ಸಿನ ಯುವಕನೊಬ್ಬ ಬಹುಮಹಡಿ ಕಟ್ಟಡದ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದು, ಇಡೀ ದೇವನಹಳ್ಳಿ(Devanahalli) ಪಟ್ಟಣವನ್ನೇ ದಿಗಿಲುಗೊಳಿಸಿದೆ.

ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಹೈಡ್ರಾಮಾ:

ದೇವನಹಳ್ಳಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಖಾಸಗಿ ಅಪಾರ್ಟ್‌ಮೆಂಟ್‌ನ 9ನೇ ಮಹಡಿ ಏರಿದ ಅಂಬೇಡ್ಕರ್ ಕಾಲೋನಿ ನಿವಾಸಿ ಆನಂದ್, ಅಲ್ಲಿಂದ ಕೆಳಗೆ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾನೆ.  ತನಗೆ ನ್ಯಾಯ ಬೇಕು ಮತ್ತು ಸ್ಥಳಕ್ಕೆ ತಕ್ಷಣವೇ ಜಿಲ್ಲಾಧಿಕಾರಿಗಳು (DC) ಬರಬೇಕು ಎಂದು ಆನಂದ್ ಪಟ್ಟು ಹಿಡಿದಿದ್ದಾನೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆನಂದ್ ತಾಯಿ ಆಗಮಿಸಿ, ಕಣ್ಣೀರು ಹಾಕುತ್ತಾ “ಕೆಳಗೆ ಇಳಿದು ಬಾ ಅಪ್ಪ” ಎಂದು ಕೈಮುಗಿದು ಬೇಡಿಕೊಂಡರೂ ಯುವಕ ಮಾತ್ರ ಕೆಳಗೆ ಇಳಿಯಲು ಒಪ್ಪಿಲ್ಲ. ತಾಯಿಯ ಕರಗುವ ಮಾತುಗಳಿಗೂ ಬಗ್ಗದ ಆನಂದ್, ಡಿಸಿ ಬರುವವರೆಗೂ ಕದಲುವುದಿಲ್ಲ ಎಂದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ.

ಆನಂದ್ ಈ ಹಿಂದೆ ಪೋಕ್ಸೋ (POCSO) ಪ್ರಕರಣವೊಂದರಲ್ಲಿ ಭಾಗಿಯಾಗಿ ಸುಮಾರು ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ ಎನ್ನಲಾಗಿದೆ. ಜೈಲಿನಿಂದ ಹೊರಬಂದ ನಂತರ ಯಾವುದೋ ಕಾರಣಕ್ಕೆ ತನಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಇಂದು ಈ ತೀವ್ರತರದ ಪ್ರತಿಭಟನೆಗೆ ಮುಂದಾಗಿದ್ದಾನೆ.

ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಕಟ್ಟಡದ ಕೆಳಗೆ ಮುನ್ನೆಚ್ಚರಿಕೆ ಕ್ರಮವಾಗಿ ಬಲೆಗಳನ್ನು ಹಾಕಲಾಗಿದೆ. ಪೊಲೀಸರು ಹರಸಾಹಸ ಪಟ್ಟು ಯುವಕನ ಮನವೊಲಿಸಲು ಪ್ರಯತ್ನಿಸುತ್ತಿದ್ದರೂ, ಆತ ತನ್ನ ಹಠ ಮುಂದುವರಿಸಿದ್ದಾನೆ. ಯುವಕನ ಈ ನಡೆಯಿಂದಾಗಿ ಅಪಾರ್ಟ್‌ಮೆಂಟ್ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೋಷಕರು ಮತ್ತು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.