S Shorts

ರಾಜ್ಯದ 6 ಜಿಲ್ಲೆಗಳಿಗೆ ಖಾಯಂ ASP ಹುದ್ದೆ ಮಂಜೂರಾತಿಗೆ ಪ್ರಸ್ತಾವನೆ: ಸರ್ಕಾರಕ್ಕೆ DG-IGP ಡಾ. ಎಂ.ಎ. ಸಲೀಂ ಪತ್ರ

ರಾಜ್ಯದ 6 ಜಿಲ್ಲೆಗಳಿಗೆ ಖಾಯಂ ASP ಹುದ್ದೆ ಮಂಜೂರಾತಿಗೆ ಪ್ರಸ್ತಾವನೆ: ಸರ್ಕಾರಕ್ಕೆ DG-IGP ಡಾ. ಎಂ.ಎ. ಸಲೀಂ ಪತ್ರ
Author: Sagaradventure
Posted By: Sagaradventure
Updated: Oct 21, 2026 | 10:30 AM

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಮೇಲ್ದರ್ಜೆಗೇರಿಸಲಾಗಿದ್ದ 30 ಹೆಚ್ಚುವರಿ ಪೊಲೀಸ್ ಅಧೀಕ್ಷಕರ (Additional SP) ಹುದ್ದೆಗಳ ಅವಧಿ ವಿಸ್ತರಣೆ ಪ್ರಸ್ತಾವನೆಯನ್ನು ಕೈಬಿಟ್ಟು, ಆ ಪೈಕಿ ಖಾಯಂ ಹುದ್ದೆಗಳಿಲ್ಲದ ರಾಜ್ಯದ 6 ಜಿಲ್ಲೆಗಳಿಗೆ ಕಾಯಂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆಗಳನ್ನು ಮಂಜೂರು ಮಾಡಲು ಹಾಗೂ ಉಳಿದ 24 ಹುದ್ದೆಗಳನ್ನು ಮೂಲ ಡಿವೈಎಸ್ಪಿ ವೃಂದಕ್ಕೆ ಪುನರ್ ಸ್ಥಾಪಿಸಲು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಹಾಗೂ ಆರಕ್ಷಕ ಮಹಾ ನಿರೀಕ್ಷಕರಾದ (DG-IGP) ಡಾ. ಎಂ.ಎ. ಸಲೀಂ ಅವರು ಒಳಾಡಳಿತ ಇಲಾಖೆಗೆ ನೂತನ ಪ್ರಸ್ತಾವನೆ ಸಲ್ಲಿಸಿದ್ದಾರೆ.

2023ರ ಅಕ್ಟೋಬರ್ 19ರ ಆದೇಶದನ್ವಯ ಸರ್ಕಾರವು 30 ಡಿವೈಎಸ್ಪಿ (ಸಿವಿಲ್) ಹುದ್ದೆಗಳನ್ನು ತಾತ್ಕಾಲಿಕವಾಗಿ ಎರಡು ವರ್ಷಗಳ ಅವಧಿಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆಗಳನ್ನಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಿತ್ತು. ಈ ಅವಧಿ ಮುಕ್ತಾಯಗೊಂಡ ನಂತರ, ಆಡಳಿತಾತ್ಮಕ ದೃಷ್ಟಿಯಿಂದ ಈ ಹುದ್ದೆಗಳನ್ನು ಪುನಃ ಎರಡು ವರ್ಷ ವಿಸ್ತರಿಸುವಂತೆ ಪೊಲೀಸ್ ಪ್ರಧಾನ ಕಚೇರಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಈ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲವೆಂದು ಒಳಾಡಳಿತ ಇಲಾಖೆಯು 2026ರ ಜೂನ್ 11ರ ಪತ್ರದಲ್ಲಿ ತಿಳಿಸಿತ್ತು.

ಈ ಹುದ್ದೆಗಳಲ್ಲಿ ಕೆ.ಸಿ.ಎಸ್.ಆರ್. ನಿಯಮ 32ರ ಅಡಿಯಲ್ಲಿ ಅಧಿಕಾರಿಗಳು ಕೇವಲ ಪ್ರಭಾರ ಭತ್ಯೆಗಳನ್ನು ಮಾತ್ರ ಪಡೆಯುತ್ತಿರುವುದರಿಂದ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದ್ದರೂ, ಸರ್ಕಾರದಿಂದ ಸ್ಪಷ್ಟ ತೀರ್ಮಾನ ಬಾರದ ಕಾರಣ ಪೊಲೀಸ್ ಇಲಾಖೆಯ ವೃಂದ ನಿರ್ವಹಣೆಯಲ್ಲಿ ಅಡೆತಡೆಗಳು ಎದುರಾಗಿದ್ದವು. ಹೀಗಾಗಿ, ಈ ಹಿಂದಿನ 2 ವರ್ಷಗಳ ವಿಸ್ತರಣೆ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ಕೈಬಿಡಲು ಡಿಜಿ-ಐಜಿಪಿ ನಿರ್ಧರಿಸಿದ್ದಾರೆ.

ಖಾಯಂ ಹುದ್ದೆ ಇಲ್ಲದ 6 ಜಿಲ್ಲೆಗಳು: ಪ್ರಸ್ತುತ ರಾಜ್ಯದ 24 ಜಿಲ್ಲೆಗಳಲ್ಲಿ ಮಾತ್ರ ಖಾಯಂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆಗಳು ಮಂಜೂರಾಗಿದ್ದು, ಕೆಳಕಂಡ 6 ಜಿಲ್ಲೆಗಳಲ್ಲಿ ಖಾಯಂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆಗಳ ಮಂಜೂರಾತಿ ಇರುವುದಿಲ್ಲ:

  • ಚಿಕ್ಕಬಳ್ಳಾಪುರ
  • ಗದಗ
  • ಧಾರವಾಡ
  • ಯಾದಗಿರಿ
  • ವಿಜಯನಗರ
  • ಕೊಪ್ಪಳ

ನೂತನ ಪ್ರಸ್ತಾವನೆಯ ಪ್ರಮುಖ ಶಿಫಾರಸುಗಳು: 

ತಾತ್ಕಾಲಿಕವಾಗಿ ಮೇಲ್ದರ್ಜೆಗೇರಿಸಲಾಗಿದ್ದ 30 ಡಿವೈಎಸ್ಪಿ (ಸಿವಿಲ್) ಹುದ್ದೆಗಳ ಪೈಕಿ, ಹೆಚ್ಚುವರಿ ಎಸ್‌ಪಿ ಹುದ್ದೆ ಇಲ್ಲದ ಮೇಲ್ಕಂಡ 6 ಜಿಲ್ಲೆಗಳಿಗೆ ತಕ್ಷಣವೇ ಖಾಯಂ ಆಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಹುದ್ದೆಗಳನ್ನು ಮಂಜೂರು ಮಾಡಲು ಕೋರಲಾಗಿದೆ. ಉಳಿದ 24 ಡಿವೈಎಸ್ಪಿ ಹುದ್ದೆಗಳನ್ನು ಪುನಃ ಡಿವೈಎಸ್ಪಿ (ಸಿವಿಲ್) ವೃಂದದಲ್ಲೇ ಪುನರ್ ಸ್ಥಾಪಿಸಿ ಆದೇಶ ಹೊರಡಿಸುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಡಾ. ಎಂ.ಎ. ಸಲೀಂ ಅವರು ಮನವಿ ಮಾಡಿದ್ದಾರೆ.