S Shorts

OTTಯಲ್ಲಿ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ಧಮಾಕ: ಮೊದಲ ವಾರದಲ್ಲೇ 1.5 ಕೋಟಿ ನಿಮಿಷ ವೀಕ್ಷಣೆ!

OTTಯಲ್ಲಿ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ಧಮಾಕ: ಮೊದಲ ವಾರದಲ್ಲೇ 1.5 ಕೋಟಿ ನಿಮಿಷ ವೀಕ್ಷಣೆ!
Author: Sagaradventure
Posted By: Sagaradventure
Updated: Oct 25, 2026 | 2:59 PM

ಬೆಂಗಳೂರು: ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಜನಪ್ರಿಯ ಕಾಮಿಕ್ ಥ್ರಿಲ್ಲರ್ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ (It’s A Medical Miracle) ಇದೀಗ ಡಿಜಿಟಲ್ ಜಗತ್ತಿನಲ್ಲೂ ಭರ್ಜರಿ ಯಶಸ್ಸು ಕಾಣುತ್ತಿದೆ. ಪ್ರಸಿದ್ಧ ಒಟಿಟಿ ವೇದಿಕೆ ‘ಮನೋರಮಾಮ್ಯಾಕ್ಸ್’ನಲ್ಲಿ (ManoramaMAX) ಬಿಡುಗಡೆಯಾದ ಮೊದಲ ವಾರದಲ್ಲೇ ಈ ಚಿತ್ರ ಬರೋಬ್ಬರಿ 1.50 ಕೋಟಿಗೂ (15 ಮಿಲಿಯನ್) ಅಧಿಕ ನಿಮಿಷಗಳ ವೀಕ್ಷಣಾ ಸಮಯವನ್ನು ದಾಖಲಿಸುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ದಕ್ಷಿಣ ಭಾರತದ ಪ್ರೇಕ್ಷಕರನ್ನು ಸೆಳೆಯಲು ಈ ಚಿತ್ರವನ್ನು ಮಲಯಾಳಂ, ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಲಭ್ಯವಾಗುವಂತೆ ಮಾಡಲಾಗಿದೆ.

ವಿಭಿನ್ನ ಕಥಾಹಂದರ ಹಾಗೂ ಪಾತ್ರವರ್ಗ: 

ನವನಿರ್ದೇಶಕ ಸ್ಯಾಮಿನ್ ಗಿರೀಶ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು ವಿಭಿನ್ನ ಕಥೆ ಹಾಗೂ ಹಾಸ್ಯದ ರೋಮಾಂಚಕ ತಿರುವುಗಳನ್ನು ಹೊಂದಿದೆ. ಕೋಮಾದಿಂದ ಪವಾಡಸದೃಶವಾಗಿ ಎಚ್ಚರಗೊಳ್ಳುವ ಯುವಕ ರೂಬಿನ್, ತನಗೆ ದೂರದ ಸದ್ದು ಹಾಗೂ ಮಾತುಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳುವ ಅಸಾಮಾನ್ಯ ಸಾಮರ್ಥ್ಯ ಬಂದಿರುವುದನ್ನು ಅರಿತುಕೊಳ್ಳುತ್ತಾನೆ. ಈ ವೇಳೆ ಆತನಿಗೆ ಎದುರಾಗುವ ಸ್ನೇಹಪರ ಪೊಲೀಸ್ ಅಧಿಕಾರಿ ಸೂರಜ್ ಪಾತ್ರ ಕಥೆಗೆ ಹೊಸ ಆಯಾಮ ನೀಡುತ್ತದೆ.

‘ಪ್ರೇಮಲು’ ಖ್ಯಾತಿಯ ಸಂಗೀತ್ ಪ್ರತಾಪ್ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದು, ನಟ ಶರಾಫುದ್ದೀನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಅಖಿಲಾ ಭಾರ್ಗವನ್, ಪಾರ್ವತಿ ಆರ್. ಕೃಷ್ಣ, ಕೊಟ್ಟಾಯಂ ನಸೀರ್ ಮುಂತಾದವರು ಅಭಿನಯಿಸಿದ್ದಾರೆ. ‘ಕರಿಕ್ಕು’ ಖ್ಯಾತಿಯ ನಿಲೀನ್ ಸಾಂಡ್ರಾ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ನಿರ್ಮಾಣ ಹಾಗೂ ತಾಂತ್ರಿಕ ವರ್ಗ: 

ಡಾ. ಪಾಲ್ಸ್ ಎಂಟರ್‌ಟೈನ್‌ಮೆಂಟ್ ಮತ್ತು ಡ್ರೀಮ್ ಬಿಗ್ ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ಡಾ. ಪಾಲ್ ವರ್ಗೀಸ್ ಹಾಗೂ ಸುಜಿತ್ ಜೆ. ನಾಯರ್ ಚಿತ್ರವನ್ನು ನಿರ್ಮಿಸಿದ್ದಾರೆ. ಮುಜೀಬ್ ಮಜೀದ್ ಅವರ ಸಂಗೀತ ಹಾಗೂ ಅಖಿಲ್ ಝೇವಿಯರ್ ಛಾಯಾಗ್ರಹಣ ಚಿತ್ರದ ಗುಣಮಟ್ಟವನ್ನು ಹೆಚ್ಚಿಸಿದೆ. 500ಕ್ಕೂ ಅಧಿಕ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಹೊಂದಿರುವ ಮನೋರಮಾಮ್ಯಾಕ್ಸ್‌ನಲ್ಲಿ ಇದೀಗ ಕನ್ನಡದಲ್ಲೂ ಈ ಚಿತ್ರ ಲಭ್ಯವಿರುವುದರಿಂದ, ಮುಂಬರುವ ದಿನಗಳಲ್ಲಿ ವೀಕ್ಷಣಾ ಸಮಯ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.