ಬೆಂಗಳೂರು: ನಗರದ ಐತಿಹಾಸಿಕ ಧರ್ಮರಾಯಸ್ವಾಮಿ ದೇವಾಲಯದ ದ್ರೌಪದಮ್ಮ ದೇವಿಗೆ ಅರ್ಪಿಸಲಾಗಿದ್ದ ಚಿನ್ನದ ಸರವನ್ನು ಬದಲಾವಣೆ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ಮುಜರಾಯಿ ಇಲಾಖೆ ಸಾರಾಸಗಟಾಗಿ ತಳ್ಳಿಹಾಕಿದೆ. ಖಾಸಗಿ ಸುದ್ದಿ ವಾಹಿನಿಯೊಂದರ ವರದಿಗೆ ಪ್ರತಿಕ್ರಿಯೆ ನೀಡಿರುವ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ (EO) ನಾಗರಾಜ್, “ನಾವು ಆಭರಣದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಅಕ್ಟೋಬರ್ 6ರಂದು ಶನಿವಾರವಾಗಿದ್ದರಿಂದ ಬ್ಯಾಂಕ್ ಸಿಬ್ಬಂದಿ ದೇವಾಲಯಕ್ಕೆ ಬರಲು ಸಾಧ್ಯವಾಗಿರಲಿಲ್ಲ. ದೇವಾಲಯದಲ್ಲಿ ಆಭರಣ ಇರಿಸಲು ಸೂಕ್ತ ಲಾಕರ್ ವ್ಯವಸ್ಥೆ ಇಲ್ಲದ ಕಾರಣ, ಸುರಕ್ಷತೆಯ ದೃಷ್ಟಿಯಿಂದ ನಾವೇ ಖುದ್ದಾಗಿ ಬ್ಯಾಂಕ್‌ಗೆ ಆಭರಣವನ್ನು ತೆಗೆದುಕೊಂಡು ಹೋಗಿದ್ದೆವು” ಎಂದು ತಿಳಿಸಿದ್ದಾರೆ.
ಹುಂಡಿಯಲ್ಲಿ ಬಂದಿದ್ದ ಆ ಚಿನ್ನದ ಸರ ಅಸಲಿಯೋ ಅಥವಾ ನಕಲಿಯೋ ಎಂದು ತಿಳಿಯಲು ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯ ನಂತರ ಅದನ್ನು ಯಥಾವತ್ತಾಗಿ ಇರಿಸಲಾಗಿದೆ. ಸರವನ್ನು ಬದಲಾಯಿಸಲಾಗಿದೆ ಅಥವಾ ಅವ್ಯವಹಾರ ನಡೆದಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ನಾಗರಾಜ್ ಅವರು ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
