S Shorts

ವಂಚಕರಿಗೆ ಕಠಿಣ ಶಿಕ್ಷೆ, ಪ್ರಾಮಾಣಿಕರಿಗೆ ಪೂರ್ಣ ರಕ್ಷೆ: CM ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ!

ವಂಚಕರಿಗೆ ಕಠಿಣ ಶಿಕ್ಷೆ, ಪ್ರಾಮಾಣಿಕರಿಗೆ ಪೂರ್ಣ ರಕ್ಷೆ: CM ಡಿ.ಕೆ.ಶಿವಕುಮಾರ್ ಖಡಕ್ ಎಚ್ಚರಿಕೆ!
Author: Sagaradventure
Posted By: Sagaradventure
Updated: Jun 26, 2026 | 5:27 PM

ವಿಧಾನಸೌಧದಲ್ಲಿ ಶುಕ್ರವಾರ ವಾಣಿಜ್ಯ ತೆರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಮಹತ್ವದ ನಿರ್ದೇಶನಗಳನ್ನು ನೀಡಿದ್ದಾರೆ. ಪ್ರಾಮಾಣಿಕ ತೆರಿಗೆದಾರರಿಗೆ ಸಂಪೂರ್ಣ ರಕ್ಷಣೆ ಒದಗಿಸುವ ಜೊತೆಗೆ, ತೆರಿಗೆ ವಂಚಕರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಅವರು ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ. 

ಯಾವುದೇ ಸರಕು ಸಾಗಣೆ ವಾಹನಗಳು ಸೂಕ್ತ ಲೆಕ್ಕಪತ್ರ ಹಾಗೂ ಅಗತ್ಯ ದಾಖಲೆಗಳಿಲ್ಲದೆ ಚೆಕ್‌ಪೋಸ್ಟ್‌ ಅಥವಾ ರಾಜ್ಯದ ಗಡಿಯನ್ನು ದಾಟುವಂತಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ತೆರಿಗೆ ವಂಚನೆ ಹಾಗೂ ಬೋಗಸ್ ಕಂಪನಿಗಳನ್ನು ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ತೆರಿಗೆ ಸೋರಿಕೆಯನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ಪಕ್ಕದ ರಾಜ್ಯಗಳ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಜಾರಿ ಸಂಸ್ಥೆಗಳೊಂದಿಗೆ ಉತ್ತಮ ಸಮನ್ವಯ ಸಾಧಿಸಿ, ಮಾಹಿತಿ ಹಂಚಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ತೆರಿಗೆ ರಿಟರ್ನ್‌ಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸದವರನ್ನು ಪತ್ತೆಹಚ್ಚಿ, ಅವರಿಂದ ಸಮಯಕ್ಕೆ ಸರಿಯಾಗಿ ರಿಟರ್ನ್ಸ್ ಸಲ್ಲಿಕೆ ಮಾಡಿಸಲು ಜಂಟಿ ಆಯುಕ್ತರುಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ತಾಕೀತು ಮಾಡಿದ್ದಾರೆ.

ಸರ್ಕಾರದ ಉದ್ದೇಶ ಯಾರಿಗೂ ಅನಗತ್ಯ ತೊಂದರೆ ನೀಡುವುದಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಡಿ.ಕೆ. ಶಿವಕುಮಾರ್, ಪ್ರಾಮಾಣಿಕ ತೆರಿಗೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಸಮಸ್ಯೆಗಳನ್ನು ಆನ್‌ಲೈನ್ ಮೂಲಕವೇ ತ್ವರಿತವಾಗಿ ಬಗೆಹರಿಸಬೇಕು ಹಾಗೂ ಅವರನ್ನು ಘನತೆಯಿಂದ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ತೆರಿಗೆ ಸೋರಿಕೆ ತಡೆಗಟ್ಟಲು ತಂತ್ರಜ್ಞಾನದ ಮೊರೆ ಹೋಗಿರುವ ಇಲಾಖೆಯು, ಹೈದರಾಬಾದ್ ಐಐಟಿ (IIT) ಸಹಯೋಗದ ಜಿಎಸ್‌ಟಿ ಅನಾಲಿಟಿಕಲ್ ಪೋರ್ಟಲ್ (GST Analytical Portal) ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ 12 ಲಕ್ಷ ತೆರಿಗೆದಾರರ ಮಾಹಿತಿಯನ್ನು ವಿಶ್ಲೇಷಿಸಿ, 360 ಡಿಗ್ರಿ ದೃಷ್ಟಿಕೋನದಲ್ಲಿ ನಿಗಾ ಇಡುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಜಿಎಸ್‌ಟಿ (GST) ಸಂಗ್ರಹದಲ್ಲಿ ರಾಜ್ಯವು ಅತ್ಯುತ್ತಮ ಸಾಧನೆ ಮಾಡಿದ್ದು, May 2026 ರ ವರೆಗಿನ ಸಂಗ್ರಹದಲ್ಲಿ ಶೇಕಡಾ 9 ರಷ್ಟು ಪ್ರಗತಿ ಸಾಧಿಸುವ ಮೂಲಕ ಕರ್ನಾಟಕ ದೇಶದಲ್ಲೇ 2 ನೇ ಸ್ಥಾನದಲ್ಲಿದೆ. ಗುಜರಾತ್, ತಮಿಳುನಾಡು, ಮಹಾರಾಷ್ಟ್ರಗಳಿಗಿಂತ ನಮ್ಮ ರಾಜ್ಯದ ಸಾಧನೆ ಉತ್ತಮವಾಗಿದ್ದು, ಇದನ್ನು 1 ನೇ ಸ್ಥಾನಕ್ಕೇರಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಮೈಸೂರು ಸೇರಿದಂತೆ ಕಾರ್ಯಕ್ಷಮತೆ ಕುಸಿದಿರುವ ವಿಭಾಗಗಳು ಯಾವುದೇ ನೆಪಗಳನ್ನು ಹೇಳದೆ ತಾಂತ್ರಿಕ ತೊಂದರೆಗಳನ್ನು ಬಗೆಹರಿಸಿಕೊಂಡು ನಿಗದಿತ ಗುರಿ ತಲುಪಬೇಕು ಹಾಗೂ ಬಾಕಿ ಇರುವ ಮೇಲ್ಮನವಿಗಳನ್ನು ವಿಳಂಬ ಮಾಡದೆ ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.