ಬೆಂಗಳೂರು: ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಿರುವ ಸರ್ಕಾರದ ಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಾರಿಗೆ ನಿಗಮಗಳಲ್ಲಿ ಬಸ್‌ಗಳಿಗೆ ಡೀಸೆಲ್ ಹಾಕಿಸಲು ಸಹ ಹಣವಿರಲಿಲ್ಲ, ಸರ್ಕಾರವೇ ನಿಗಮಗಳಿಗೆ ಹಣ ನೀಡಬೇಕಾದಂತಹ ಆರ್ಥಿಕ ದುಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಆರ್ಥಿಕ ಹೊರೆ ಸರಿದೂಗಿಸಲು ಅನಿವಾರ್ಯವಾಗಿ ಟಿಕೆಟ್ ದರ ಏರಿಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಸ್ ದರವನ್ನು ಏಕಾಏಕಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಲ್ಲ, ಪ್ರಯಾಣದ ಹಂತಗಳ (ಸ್ಟೇಜ್) ಆಧಾರದ ಮೇಲೆ ಕೇವಲ 2 ರಿಂದ 3 ರೂ.ಗಳಷ್ಟು ಮಾತ್ರ ಹೆಚ್ಚಳ ಮಾಡಿರಬಹುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಪೆಟ್ರೋಲ್, ಡೀಸೆಲ್ ದರ ಇಳಿಕೆ ಕುರಿತು ಪ್ರಸ್ತಾಪಿಸಿದ ಅವರು, “ಮೊದಲು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಕಡಿಮೆ ಮಾಡಿಸಿ, ಆಗ ನಾವು ಕೂಡ ಬಸ್ ಟಿಕೆಟ್ ದರವನ್ನು ಖಂಡಿತವಾಗಿ ಕಡಿಮೆ ಮಾಡುತ್ತೇವೆ” ಎಂದು ಸವಾಲು ಹಾಕುವ ಮೂಲಕ ದರ ಏರಿಕೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
