ಮಂಡ್ಯ: ಮುಂಬರುವ 2028ರ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಮಂಡ್ಯ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಗುರಿಯೊಂದಿಗೆ ಕಾರ್ಯಕರ್ತರು ವೈಯಕ್ತಿಕ ಭಿನ್ನಾಭಿಪ್ರಾಯ ಮರೆತು ಈಗಿನಿಂದಲೇ ಸಜ್ಜಾಗಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.
ಮಂಡ್ಯದ ಹೊಳಲು ವೃತ್ತದ ಮುಂಭಾಗದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯ ‘ಇಂದಿರಾ ಭವನ’ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕಾರ್ಯಕರ್ತರ ಬೆವರಿನ ಕಾಣಿಕೆಯಿಂದ ‘ಇಂದಿರಾ ಭವನ’:
ಇಂದಿರಾ ಭವನ ಕೇವಲ ಪಕ್ಷದ ಕಚೇರಿಯಾಗದೆ, ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತನ ಸ್ವಾಭಿಮಾನದ ಸಂಕೇತವಾಗಬೇಕು. ಊರಿನಲ್ಲಿ ದೇವಸ್ಥಾನ ನಿರ್ಮಿಸಲು ಚಂದಾ ಎತ್ತುವಂತೆ, ಪ್ರತಿಯೊಬ್ಬ ಕಾರ್ಯಕರ್ತರೂ ಶಕ್ತ್ಯಾನುಸಾರ 100 ರೂ.ನಿಂದ 10 ಲಕ್ಷ ರೂ.ವರೆಗೆ ಕಾಣಿಕೆ ನೀಡಿ ಭವನ ನಿರ್ಮಾಣದಲ್ಲಿ ಕೈಜೋಡಿಸಬೇಕು. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷಕ್ಕೆ ಪ್ರತ್ಯೇಕ ಇಂದಿರಾ ಭವನ ನಿರ್ಮಾಣವಾಗಬೇಕು ಎಂದು ಅವರು ಆಶಿಸಿದರು.
ಪಕ್ಷ ಸಂಘಟನೆಗೆ ‘ಗ್ಯಾರಂಟಿ’ ಸಮಿತಿ ಹಾಗೂ ಯುವ ಸಂಘ:
ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೇ ಪಕ್ಷದ ಸಂಪರ್ಕ ಸೇತುವಾಗಿದ್ದು, ಪ್ರತಿ ಪಂಚಾಯಿತಿಯಲ್ಲಿ 6 ಸದಸ್ಯರ ‘ಗ್ಯಾರಂಟಿ ಸಮಿತಿ’ಯನ್ನು ಇನ್ನೆರಡು ದಿನಗಳಲ್ಲಿ ರಚಿಸಬೇಕು. ಅಲ್ಲದೆ, ಯುವಕರಲ್ಲಿ ನಾಯಕತ್ವ ಗುಣ ಬೆಳೆಸಲು ಪ್ರತಿ ಪಂಚಾಯಿತಿಯಲ್ಲಿ ಕನಿಷ್ಠ 250 ಸದಸ್ಯರ ‘ಭಾರತ್ ಜೋಡೋ ಯುವ ಸಂಘ’ ರಚಿಸಿ, 15 ದಿನಕ್ಕೊಮ್ಮೆ ಸಭೆ ನಡೆಸುವಂತೆ ಮುಖಂಡರಿಗೆ ಡಿಸಿಎಂ ಸೂಚನೆ ನೀಡಿದರು.
ಮೇಕೆದಾಟು: ಕೇವಲ 500 ಎಕರೆ ರೈತರ ಜಮೀನು ಸ್ವಾಧೀನ:
ಇದೇ ವೇಳೆ ಮೇಕೆದಾಟು ಯೋಜನೆ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, ಯೋಜನೆಗೆ ಸುಪ್ರೀಂಕೋರ್ಟ್ನಿಂದ ಅನುಮತಿ ದೊರೆತಿದ್ದು, ಒಟ್ಟು 2,500 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇದರಲ್ಲಿ ರೈತರ ಖಾಸಗಿ ಜಮೀನು ಕೇವಲ 500 ಎಕರೆ ಮಾತ್ರ ಭೂಸ್ವಾಧೀನವಾಗಲಿದೆ ಎಂದು ಸ್ಪಷ್ಟಪಡಿಸಿದರು.
66 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವಿರುವ ಈ ಯೋಜನೆಯಿಂದ ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡುವ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸಬಹುದು. ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿಗೆ ಪರ್ಯಾಯ ಜಮೀನು ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ ಬಜೆಟ್ ವೇಳೆಗೆ ಕೇಂದ್ರದಿಂದ ಅರಣ್ಯ ಅನುಮತಿ ಪಡೆಯುವ ನಿರೀಕ್ಷೆಯಿದೆ ಎಂದರು.
ವಿಮಾನ ಎಂಜಿನ್ ಘಟಕಕ್ಕೆ ಬೇಕಾದಷ್ಟು ಜಮೀನು ನೀಡಲು ಸಿದ್ಧ:
ವಿಮಾನ ಎಂಜಿನ್ ದುರಸ್ತಿ ಘಟಕಕ್ಕೆ ರಾಜ್ಯ ಸರ್ಕಾರ ಜಮೀನು ನೀಡುತ್ತಿಲ್ಲ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ತಿರುಗೇಟು ನೀಡಿದ ಡಿಸಿಎಂ, “ಘಟಕಕ್ಕೆ ನಾವು ಈಗಾಗಲೇ 100 ಎಕರೆ ಜಮೀನು ನೀಡಲು ಒಪ್ಪಿದ್ದೆವು. ಈಗ 500 ಎಕರೆ ಬೇಕೆಂದು ಕೇಳಿದ್ದಾರೆ, ಖಂಡಿತ ಕೊಡುತ್ತೇವೆ. ಅವರು ಯಾವ ಜಮೀನು ತೋರಿಸುತ್ತಾರೋ ಅದನ್ನು ಸ್ವಾಧೀನಪಡಿಸಿಕೊಡಲು ನಮಗೆ ಯಾವುದೇ ಅಭ್ಯಂತರವಿಲ್ಲ. ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರವಿದ್ದು, ಅವರು ಮೊದಲು ಕೆಲಸ ಆರಂಭಿಸಲಿ,” ಎಂದು ಸ್ಪಷ್ಟಪಡಿಸಿದರು.
