S Shorts

ಬೆಂಗಳೂರು ದಕ್ಷಿಣ ವಿಭಾಗದ ನೂತನ DCPಯಾಗಿ ಡಾ. ಕೆ.ವಂಶಿಕೃಷ್ಣ ನೇಮಕ: ರಾಜ್ಯ ಸರ್ಕಾರದಿಂದ ದಿಢೀರ್ ಆದೇಶ

ಬೆಂಗಳೂರು ದಕ್ಷಿಣ ವಿಭಾಗದ ನೂತನ DCPಯಾಗಿ ಡಾ. ಕೆ.ವಂಶಿಕೃಷ್ಣ ನೇಮಕ: ರಾಜ್ಯ ಸರ್ಕಾರದಿಂದ ದಿಢೀರ್ ಆದೇಶ
Author: Sagaradventure
Posted By: Sagaradventure
Updated: Apr 24, 2026 | 6:36 PM

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಕರ್ನಾಟಕ ಲೋಕಾಯುಕ್ತದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ (SP) ಸೇವೆ ಸಲ್ಲಿಸುತ್ತಿದ್ದ ಐಪಿಎಸ್ ಅಧಿಕಾರಿ ಡಾ. ಕೋನ ವಂಶಿ ಕೃಷ್ಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇವರನ್ನು ಬೆಂಗಳೂರು ನಗರದ ದಕ್ಷಿಣ ವಿಭಾಗದ ನೂತನ ಉಪ ಪೊಲೀಸ್ ಆಯುಕ್ತರನ್ನಾಗಿ (DCP) ನೇಮಕ ಮಾಡಲಾಗಿದೆ.

ಈ ಹಿಂದೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ಶ್ರೀ ಲೋಕೇಶ್ ಭರಮಪ್ಪ ಜಗಲಾಸರ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ 2014 ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಡಾ. ಕೋನ ವಂಶಿ ಕೃಷ್ಣ ಅವರನ್ನು ನಿಯೋಜಿಸಲಾಗಿದೆ.

ಮುಂದಿನ ಆದೇಶದವರೆಗೆ ಈ ನೇಮಕಾತಿ ಚಾಲ್ತಿಯಲ್ಲಿರುತ್ತದೆ ಎಂದು ಶುಕ್ರವಾರ (ಏಪ್ರಿಲ್ 24, 2026) ಹೊರಡಿಸಿರುವ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ಸರ್ಕಾರದ ಅಧೀನ ಕಾರ್ಯದರ್ಶಿ ಸಂಜಯ್ ಬಿ. ಎಸ್. ಅವರು ರಾಜ್ಯಪಾಲರ ಆದೇಶದ ಮೇರೆಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದಾರೆ.