ಯಲ್ಲಾಪುರ: ನಿಯಂತ್ರಣ ತಪ್ಪಿ ಪಲ್ಟಿಯಾಗುತ್ತಿದ್ದ ಲಾರಿಯಿಂದ ಪ್ರಾಣ ಉಳಿಸಿಕೊಳ್ಳಲು ಜಿಗಿದಿದ್ದ ಚಾಲಕ ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಶಿರಲೆ ಕ್ರಾಸಿನ ಬಳಿ ನಡೆದಿದೆ. ಬಿಹಾರ ಮೂಲದ ಮುಖೇಶಕುಮಾರ ತಿಕೇದ ನಾರಾಯಣ ದೇವ(27) ಮೃತ ದುರ್ದೈವಿ ಚಾಲಕನಾಗಿದ್ದಾನೆ.
ಕಟ್ಟಡ ನಿರ್ಮಾಣದ ಕಬ್ಬಿಣದ ಸರಳುಗಳನ್ನ ಸಾಗಿಸುತ್ತಿದ್ದ ಲಾರಿ ಯಲ್ಲಾಪುರದಿಂದ ಅಂಕೋಲಾದತ್ತ ಹೊರಟಿತ್ತು. ಈ ವೇಳೆ ಅರಬೈಲ್ ಘಟ್ಟ ಪ್ರವೇಶಿಸುತ್ತಿದ್ದಂತೆ ಶಿರಲೆ ಕ್ರಾಸಿನಿಂದ ಸುಮಾರು 500 ಮೀಟರ್ ದೂರದಲ್ಲಿ ಲಾರಿ ನಿಯಂತ್ರಣ ತಪ್ಪಿ ಗಟಾರಕ್ಕೆ ಬಿದ್ದಿದೆ.
ಬೀಳುತ್ತಿದ್ದ ಲಾರಿಯಿಂದ ಚಾಲಕ ಜೀವ ಉಳಿಸಿಕೊಳ್ಳಲು ರಸ್ತೆಗೆ ಜಿಗಿದಿದ್ದು, ಈ ವೇಳೆ ರಸ್ತೆ ಮೇಲೆ ಬಿದ್ದು ತಲೆ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ರಸ್ತೆ ಪಕ್ಕ ಕಾಲುವೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಲಾರಿಗೂ ಸಾಕಷ್ಟು ಹಾನಿಯಾಗಿದೆ.
ಲಾರಿ ಬಿದ್ದ ಹಿನ್ನಲೆ ಅರಬೈಲ್ ಘಟ್ಟದಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಯಲ್ಲಾಪುರದ ರವೀಂದ್ರ ನಗರದ ಸುಜಯ ಮರಾಠಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪಿಐ ರಮೇಶ್ ಹಾನಾಪುರ ಮತ್ತು ಪಿಎಸ್‌ಐ ಸಿದ್ದಪ್ಪ ಗುಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
