S Shorts

ತುಮಕೂರು ಬಾಂಬ್ ಸ್ಫೋಟ ಆತ್ಮಹತ್ಯೆ ಕೇಸ್: ಡೆಡ್ಲಿ ಬಾಂಬ್ ಮೂಲದ ಹಿಂದೆ ಬಿದ್ದ ಪೊಲೀಸರು!

ತುಮಕೂರು ಬಾಂಬ್ ಸ್ಫೋಟ ಆತ್ಮಹತ್ಯೆ ಕೇಸ್: ಡೆಡ್ಲಿ ಬಾಂಬ್ ಮೂಲದ ಹಿಂದೆ ಬಿದ್ದ ಪೊಲೀಸರು!
Author: Meghana Gowda
Posted By: Meghana Gowda
Updated: Jun 29, 2026 | 10:13 AM

ತುಮಕೂರು: ರಾಜಧಾನಿ ಬೆಂಗಳೂರು ಬೆನ್ನಲ್ಲೇ ಇದೀಗ ತುಮಕೂರಿನಲ್ಲಿ ಭಗ್ನ ಪ್ರೇಮಿಯೊಬ್ಬ ನಾಡಬಾಂಬ್ ಸ್ಫೋಟಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಇದೀಗ ಸ್ಫೋಟಕ್ಕೆ ಬಳಕೆಯಾದ ಆ ಡೆಡ್ಲಿ ಬಾಂಬ್‌ನ ಮೂಲ ಯಾವುದು ಎಂಬ ರಹಸ್ಯ ಭೇದಿಸಲು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮೃತ ನಾಗೇಂದ್ರ ಇಷ್ಟು ಭೀಕರ ತೀವ್ರತೆ ಇರುವ ನಾಡಬಾಂಬ್ ಅನ್ನು ಎಲ್ಲಿಂದ ಪಡೆದ ಎಂಬುದು ಸದ್ಯ ಪೊಲೀಸರ ಮುಂದಿರುವ ಅತಿ ದೊಡ್ಡ ಯಕ್ಷಪ್ರಶ್ನೆಯಾಗಿದೆ.

ಈ ತೀವ್ರ ಸ್ವರೂಪದ ನಾಡಬಾಂಬ್ ಅನ್ನು ಸ್ವತಃ ನಾಗೇಂದ್ರನೇ ತಯಾರು ಮಾಡಿದ್ದನೇ ಅಥವಾ ಕಾಡುಪ್ರಾಣಿಗಳ ಶಿಕಾರಿಗಾಗಿ ಬಾಂಬ್ ತಯಾರಿಸುವ ಕಾಡಂಚಿನ ಜನರು ಇದಕ್ಕೆ ಸಾಥ್ ನೀಡಿದ್ದಾರೆಯೇ ಎಂಬ ಅನುಮಾನಗಳು ದಟ್ಟವಾಗಿವೆ. ಸಾಮಾನ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ, ಜೋಯಿಡಾ ಮತ್ತು ದಾಂಡೇಲಿ ಭಾಗದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಕಾಡುಹಂದಿ ಸೇರಿದಂತೆ ಇತರೆ ಪ್ರಾಣಿಗಳ ಬೇಟೆಗಾಗಿ ಇಂತಹ ಅಪಾಯಕಾರಿ ನಾಡಬಾಂಬ್‌ಗಳನ್ನು ಅಕ್ರಮವಾಗಿ ಹೆಚ್ಚಾಗಿ ಬಳಸಲಾಗುತ್ತದೆ. ಹೀಗಾಗಿ ನಾಗೇಂದ್ರ ಇದೇ ಭಾಗದಿಂದ ಬಾಂಬ್ ತಂದಿರಬಹುದು ಎಂದು ಶಂಕಿಸಲಾಗಿದೆ.

ಬಾಂಬ್ ಸಪ್ಲೈ ಮಾಡಿದ ಕಿಂಗ್‌ಪಿನ್‌ಗಳನ್ನು ಪತ್ತೆಹಚ್ಚಲು ಇದೀಗ ಅಂಕೋಲಾ ಹಾಗೂ ತುಮಕೂರು ಪೊಲೀಸರು ಜಂಟಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅರಣ್ಯ ವ್ಯಾಪ್ತಿಯ ಹಳ್ಳಿಗಳಲ್ಲಿ ಮತ್ತು ಶಂಕಿತ ಬಾಂಬ್ ತಯಾರಕರನ್ನು ಕೇಂದ್ರೀಕರಿಸಿ ಪೊಲೀಸರ ಜಂಟಿ ತಂಡ ಭರ್ಜರಿ ತಲಾಷ್ ಆರಂಭಿಸಿದೆ.