S Shorts

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ AI ತಂತ್ರಜ್ಞಾನ!

ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ: ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ AI ತಂತ್ರಜ್ಞಾನ!
Author: Sagaradventure
Posted By: Sagaradventure
Updated: Jul 5, 2026 | 9:28 PM

ಕರ್ನಾಟಕದ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಆವರಿಸಿದ್ದು, ಇದರ ಮುಂದುವರಿದ ಭಾಗವಾಗಿ ಇದೀಗ ಶಿಕ್ಷಣ ಇಲಾಖೆಯು (Karnataka Education Department) ಸರ್ಕಾರಿ ಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ ಅಥವಾ ಎಐ (Artificial Intelligence) ತಂತ್ರಜ್ಞಾನವನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ. ಸ್ಮಾರ್ಟ್ ಕ್ಲಾಸ್ ಮತ್ತು ಆನ್‌ಲೈನ್ ಬೋಧನೆಯ ನಂತರ, ಇದೀಗ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಎಐ ಮೂಲಕ ಹೆಚ್ಚು ಸುಲಭ ಹಾಗೂ ತ್ವರಿತಗೊಳಿಸಲು ಯೋಜನೆ ರೂಪಿಸಲಾಗಿದೆ.

ಪ್ರಾಥಮಿಕ ಹಂತದಲ್ಲಿ 8ರಿಂದ 12ನೇ ತರಗತಿಯ ಪರೀಕ್ಷೆಗಳಲ್ಲಿ ಈ ನೂತನ ವ್ಯವಸ್ಥೆಯನ್ನು ಅಳವಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದುವರೆಗೆ ಪರೀಕ್ಷೆ ಮುಗಿದ ಬಳಿಕ ಸಾವಿರಾರು ಉತ್ತರ ಪತ್ರಿಕೆಗಳನ್ನು ತಿದ್ದುವುದು, ಅಂಕ ದಾಖಲಿಸುವುದು ಹಾಗೂ ದತ್ತಾಂಶ ಸಂಗ್ರಹಿಸುವ ಪ್ರಕ್ರಿಯೆಗೆ ಶಿಕ್ಷಕರು ಸಾಕಷ್ಟು ಸಮಯ ಮೀಸಲಿಡಬೇಕಿತ್ತು. ಇದರಿಂದಾಗಿ ತರಗತಿಗಳ ಪಾಠ-ಪ್ರವಚನಗಳ ಮೇಲೂ ಪರಿಣಾಮ ಬೀರುತ್ತಿತ್ತು. ಇದೀಗ ಆ ಹೊರೆಯನ್ನು ತಗ್ಗಿಸಲು ಎಐ ತಂತ್ರಜ್ಞಾನ ನೆರವಾಗಲಿದೆ ಎಂದು ಇಲಾಖೆ ತಿಳಿಸಿದೆ.

ಎಐ ಮೂಲಕ ಉತ್ತರ ಪತ್ರಿಕೆ ಕರೆಕ್ಷನ್ ಹೇಗೆ?

ಹೊಸ ವ್ಯವಸ್ಥೆಯಡಿ ಶಿಕ್ಷಕರು ಉತ್ತರ ಪತ್ರಿಕೆಗಳನ್ನು ಮೊಬೈಲ್ ಅಥವಾ ಸ್ಕ್ಯಾನರ್ ಮೂಲಕ ಡಿಜಿಟಲ್ ರೂಪದಲ್ಲಿ ಅಪ್‌ಲೋಡ್ ಮಾಡಲಿದ್ದಾರೆ. ಆ ನಂತರ ಎಐ ತಂತ್ರಜ್ಞಾನವು ಉತ್ತರಗಳನ್ನು ವಿಶ್ಲೇಷಿಸಿ ಸೂಕ್ತ ಅಂಕಗಳನ್ನು ಸೂಚಿಸುತ್ತದೆ. ಇದರ ಜೊತೆಗೆ ವಿದ್ಯಾರ್ಥಿಗಳ ದತ್ತಾಂಶವನ್ನು ಸ್ವಯಂಚಾಲಿತವಾಗಿ ಸಂಗ್ರಹಿಸುವ ಕೆಲಸವನ್ನೂ ಎಐ ಮಾಡುತ್ತದೆ. ಆದರೆ, ಎಐ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಎಐ ನೀಡಿದ ಅಂಕಗಳ ನಿಖರತೆಯನ್ನು ಶಿಕ್ಷಕರೇ ಖುದ್ದಾಗಿ ಪರಿಶೀಲಿಸಿ, ದೃಢೀಕರಿಸಿ ಅಂತಿಮಗೊಳಿಸಲಿದ್ದಾರೆ. ಈ ಮೂಲಕ ತಂತ್ರಜ್ಞಾನ ಮತ್ತು ಶಿಕ್ಷಕರ ಅನುಭವ ಎರಡನ್ನೂ ಸಂಯೋಜಿಸಿ ಮೌಲ್ಯಮಾಪನ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ನಡೆಸಲಾಗುತ್ತದೆ.

ಒಂದೇ ಬಾರಿಗೆ 15 ಲಕ್ಷ ಪತ್ರಿಕೆಗಳ ಮೌಲ್ಯಮಾಪನ ಸಾಮರ್ಥ್ಯ

ಐಐಟಿ ಧಾರವಾಡದ (IIT Dharwad) ಸಹಯೋಗದೊಂದಿಗೆ ಮೌಲ್ಯಮಾಪನಕ್ಕೆ ಅಗತ್ಯವಿರುವ ಎಐ ಆಧಾರಿತ ತಂತ್ರಜ್ಞಾನವನ್ನು ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಇದನ್ನು ಹಂತ ಹಂತವಾಗಿ ಜಾರಿಗೆ ತರಲು ಇಲಾಖೆ ತಯಾರಿ ನಡೆಸಿದೆ. ಈ ಅತ್ಯಾಧುನಿಕ ಎಐ ವ್ಯವಸ್ಥೆಯು ಒಂದೇ ಬಾರಿಗೆ ಸುಮಾರು 15 ಲಕ್ಷ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಬೃಹತ್ ಸಾಮರ್ಥ್ಯವನ್ನು ಹೊಂದಿದೆ.

ಕೇವಲ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾತ್ರವಲ್ಲದೆ, ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಕೆಲಸಕ್ಕೂ ಎಐ ನೆರವಾಗಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಪರೀಕ್ಷಾ ಮೌಲ್ಯಮಾಪನದಲ್ಲಿ ಪಾರದರ್ಶಕತೆ, ನಿಖರತೆ ಹಾಗೂ ವೇಗ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯನ್ನು ಶಿಕ್ಷಣ ಇಲಾಖೆ ಹೊಂದಿದೆ.