S Shorts

Hassan, Tumkur, Mandyaದಲ್ಲಿ ಕೃಷಿ ಇಲಾಖೆ ಮಿಂಚಿನ ಕಾರ್ಯಾಚರಣೆ: ಲಕ್ಷಾಂತರ ಮೌಲ್ಯದ ಅಕ್ರಮ ಬೀಜ, ರಸಗೊಬ್ಬರ ಜಪ್ತಿ!

Hassan, Tumkur, Mandyaದಲ್ಲಿ ಕೃಷಿ ಇಲಾಖೆ ಮಿಂಚಿನ ಕಾರ್ಯಾಚರಣೆ: ಲಕ್ಷಾಂತರ ಮೌಲ್ಯದ ಅಕ್ರಮ ಬೀಜ, ರಸಗೊಬ್ಬರ ಜಪ್ತಿ!
Author: Sagaradventure
Posted By: Sagaradventure
Updated: Jul 5, 2026 | 3:13 PM

ಬೆಂಗಳೂರು: ರೈತರಿಗೆ ವಂಚನೆಯಾಗುವುದನ್ನು ತಪ್ಪಿಸಲು ಹಾಗೂ ಅನಧಿಕೃತ ಕೃಷಿ ಪರಿಕರಗಳ ಮಾರಾಟಕ್ಕೆ ಬ್ರೇಕ್ ಹಾಕಲು ರಾಜ್ಯ ಕೃಷಿ ಇಲಾಖೆ ಸಮರ ಸಾರಿದೆ. ಕೃಷಿ ಇಲಾಖೆಯ ಆಯುಕ್ತರಾದ ಡಾ.ಬಿ.ಸಿ. ಸತೀಶ್ ಅವರ ಖಡಕ್ ಸೂಚನೆ ಮೇರೆಗೆ ಕೃಷಿ ಅಧಿಕಾರಿಗಳು ಮತ್ತು ಸಿಬ್ಬಂದಿ ನೇತೃತ್ವದ ಪ್ರತ್ಯೇಕ ತಂಡಗಳು ರಾಜ್ಯದ ಹಾಸನ, ತುಮಕೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿವೆ. ವಿವಿಧ ರಸಗೊಬ್ಬರ ಹಾಗೂ ಬೀಜ ಮಾರಾಟ ಕೇಂದ್ರಗಳ ಮೇಲೆ ಹಠಾತ್ ದಾಳಿ ನಡೆಸಿರುವ ಅಧಿಕಾರಿಗಳು, ಲಕ್ಷಾಂತರ ರೂಪಾಯಿ ಮೌಲ್ಯದ ಅನಧಿಕೃತ ಬೀಜ, ರಸಗೊಬ್ಬರ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ವಶಪಡಿಸಿಕೊಂಡಿದ್ದಾರೆ.

ಹಾಸನದಲ್ಲಿ ಭಾರಿ ಪ್ರಮಾಣದ ದಾಸ್ತಾನು ಪತ್ತೆ

ಹಾಸನ ಜಿಲ್ಲೆಯಲ್ಲಿ ಮೂರು ಪ್ರತ್ಯೇಕ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಸಾಲಗಾಮೆ ಹೋಬಳಿಯ ಕೊಂಡಜ್ಜಿಕೊಪ್ಪಲುವಿನ ಕಾರ್ತಿಕ ಟ್ರೇಡರ್ಸ್‌ನಲ್ಲಿ ‘ಬೀಜ ಕಾಯ್ದೆ 1966’ ಉಲ್ಲಂಘಿಸಿ, ಯಾವುದೇ ಅನುಮತಿ ಇಲ್ಲದೇ ದಾಸ್ತಾನು ಮಾಡಲಾಗಿದ್ದ ಸುಮಾರು 85 ಸಾವಿರ ರೂ. ಮೌಲ್ಯದ 180 ಕೆ.ಜಿ. ಹೈಬ್ರಿಡ್ ಮೆಕ್ಕೆಜೋಳ ಬೀಜಗಳನ್ನು ಜಪ್ತಿ ಮಾಡಲಾಗಿದೆ.

ಅದೇ ರೀತಿ, ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿಯ ಪುಷ್ಪಗಿರಿ ಅಗ್ರೋ ಕೇಂದ್ರದಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ್ದ ಸುಮಾರು 12 ಸಾವಿರ ರೂ. ಮೌಲ್ಯದ 30 ಕೆ.ಜಿ. ಹೈಬ್ರಿಡ್ ಮೆಕ್ಕೆಜೋಳ ಹಾಗೂ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಮದಿಹಳ್ಳಿಯ ಶ್ರೀ ವೆಂಕಟೇಶ್ವರ ಟ್ರೇಡರ್ಸ್‌ನಲ್ಲಿ ಕಾನೂನು ಉಲ್ಲಂಘಿಸಿ ದಾಸ್ತಾನು ಮಾಡಲಾಗಿದ್ದ ಬರೋಬ್ಬರಿ 1.77 ಲಕ್ಷ ರೂ. ಮೌಲ್ಯದ 88 ಚೀಲ ಯೂರಿಯಾ ಮತ್ತು ಪಾಸ್ಫೋ ಜಿಪ್ಸಮ್ ಗ್ರ್ಯಾನ್ಯುಲ್ಸ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ತುಮಕೂರು ಮತ್ತು ಮಂಡ್ಯದಲ್ಲಿ ಜಪ್ತಿಯಾದ ವಸ್ತುಗಳು

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಗೇಶಿ ಹೋಬಳಿಯಲ್ಲಿರುವ ಹಸಿರು ಹೈಟೆಕ್ ಸೀಡ್ಸ್ ಕೇಂದ್ರದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 86 ಸಾವಿರ ರೂ. ಮೌಲ್ಯದ 22 ಲೀಟರ್ ಸೂಕ್ಷ್ಮ ಪೋಷಕಾಂಶ ಮಿಶ್ರಣವನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನು, ಮಂಡ್ಯ ತಾಲ್ಲೂಕಿನ ಇಂದುವಾಳದಲ್ಲಿ ಶನಿವಾರ (ಜುಲೈ 4) ತಡರಾತ್ರಿ ಕಾರ್ಯಾಚರಣೆ ನಡೆಸಿರುವ ಮಂಡ್ಯದ ಕೃಷಿ ಅಧಿಕಾರಿಗಳು, ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಅನಧಿಕೃತವಾಗಿ ಸಾಗಾಟ ಮಾಡಲಾಗುತ್ತಿದ್ದ ಸುಮಾರು 300 ಚೀಲ ಎನ್.ಎಫ್.ಎಲ್. ಯೂರಿಯಾವನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನಿಯಮ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ

ಈ ಕಾರ್ಯಾಚರಣೆಯ ಮೂಲಕ ಕೃಷಿ ಇಲಾಖೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ. ರಾಜ್ಯದ ಯಾವುದೇ ಭಾಗದಲ್ಲಿ ಬೀಜ ಮತ್ತು ರಸಗೊಬ್ಬರ ಮಾರಾಟಗಾರರು ನಿಯಮಬಾಹಿರವಾಗಿ ಚಟುವಟಿಕೆಗಳನ್ನು ನಡೆಸುತ್ತಿರುವುದು, ಕೃತಕ ಅಭಾವ ಸೃಷ್ಟಿಸುವುದು ಅಥವಾ ನಕಲಿ ಪರಿಕರಗಳನ್ನು ಮಾರಾಟ ಮಾಡುವುದು ಕಂಡುಬಂದರೆ ಅಂತಹವರ ವಿರುದ್ಧ ಇಲಾಖೆಯು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಕೃಷಿ ಇಲಾಖೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.