ಬೆಂಗಳೂರು:ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಡುವ ಲಕ್ಷಣಗಳು ಕಾಣಿಸುತ್ತಿದ್ದು, ಕರುನಾಡಿಗೆ ಭೀಕರ ಬರಗಾಲದ ಗಂಡಾಂತರ ಎದುರಾಗಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಜೂನ್ ತಿಂಗಳು ಮುಗಿಯುತ್ತಾ ಬಂದರೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ಇಡೀ ರಾಜ್ಯ ಒಣಗುತ್ತಿದೆ. ಇದರ ಬೆನ್ನಲ್ಲೇ ರಾಜ್ಯ ಹವಾಮಾನ ಇಲಾಖೆಯ ಅಧಿಕಾರಿಗಳು ನೀಡಿರುವ ಮುನ್ಸೂಚನೆ ಇನ್ನುಳಿದ ಮೂರು ತಿಂಗಳ ಅವಧಿಯ ಮೇಲೂ ಕಪ್ಪುದಟ್ಟ ಹರಡುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಕೇವಲ ಶೇ.20 ರಷ್ಟು ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಆತಂಕ ವ್ಯಕ್ತಪಡಿಸಿದೆ.
ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಜೂನ್ ತಿಂಗಳ ವಾಡಿಕೆ ಮಳೆ 192 ಮಿಲಿ ಮೀಟರ್ ಆಗಬೇಕಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ದಾಖಲಾಗಿರುವುದು ಕೇವಲ 109 ಮಿಲಿ ಮೀಟರ್ ಮಳೆ ಮಾತ್ರ. ಅಂದರೆ ಜೂನ್ ಒಂದೇ ತಿಂಗಳಲ್ಲಿ ಬರೋಬ್ಬರಿ ಶೇ.43 ರಷ್ಟು ಮಳೆ ಕೊರತೆ ಎದುರಾಗಿದೆ. ಕಳೆದ ವರ್ಷ (2025) ಜೂನ್ ತಿಂಗಳಲ್ಲಿ ಕೇವಲ ಶೇ.8 ರಷ್ಟು ಹಾಗೂ ಜುಲೈನಲ್ಲಿ ಶೇ.10 ರಷ್ಟು ಮಾತ್ರ ಮಳೆ ಕೊರತೆಯಾಗಿತ್ತು. ಆದರೆ ಈ ಬಾರಿ ಪರಿಸ್ಥಿತಿ ತೀರಾ ಗಂಭೀರವಾಗಿದ್ದು, ಮುಂದಿನ ಮೂರು ತಿಂಗಳುಗಳಲ್ಲಿ ಶೇ.70 ಕ್ಕೂ ಅಧಿಕ ಮಳೆ ಕೊರತೆಯಾಗುವ ಭೀತಿ ಎದುರಾಗಿದೆ.
ಈ ಬಾರಿ ಮುಂಗಾರು ಮಾರುತಗಳು ತಣ್ಣಗಾಗಲು ಪ್ರಮುಖ ಹವಾಮಾನ ಬದಲಾವಣೆಗಳು ಕಾರಣವಾಗಿವೆ ಎಂದು ಹವಾಮಾನ ವಿಜ್ಞಾನಿ ಲತಾ ಶ್ರೀಧರ್ ತಿಳಿಸಿದ್ದಾರೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತಗಳ (Low Pressure) ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದರೊಂದಿಗೆ ಮುಂಗಾರು ಗಾಳಿ ತೀರಾ ದುರ್ಬಲಗೊಂಡಿದ್ದು, ವಾತಾವರಣದಲ್ಲಿ ತೇವಾಂಶದ ಹರಿವು ಕುಂಠಿತಗೊಂಡಿದೆ. ಮುಂಗಾರು ಅಕ್ಷರೇಖೆಯು ಉತ್ತರ ಭಾರತದ ಕಡೆಗೆ ಸರಿದಿರುವುದು ಹಾಗೂ ಜಾಗತಿಕವಾಗಿ ಎಲ್‌ನಿನೋ (El Nino Effect) ಪ್ರಭಾವ ಹೆಚ್ಚಾಗಿರುವುದು ರಾಜ್ಯದಲ್ಲಿ ಮಳೆ ಮಾಯವಾಗಲು ಮುಖ್ಯ ಕಾರಣವಾಗಿದೆ ಎಂದು ಅವರು ವಿಶ್ಲೇಷಿಸಿದ್ದಾರೆ. ಹವಾಮಾನ ಇಲಾಖೆಯ ಈ ವರದಿ ರೈತ ವಲಯ ಸೇರಿದಂತೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.
