ಬೆಂಗಳೂರಿನಲ್ಲಿ ಜಿಬಿಎ (Greater Bengaluru Authority) ಚುನಾವಣೆಯ ಕಾವು ರಂಗೇರುತ್ತಿರುವ ಬೆನ್ನಲ್ಲೇ ರಕ್ತಪಾತ ಶುರುವಾಗಿದೆ. ಜಯನಗರದ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಅವರ ಆಪ್ತ ಹಾಗೂ ಜಿಬಿಎ ಚುನಾವಣೆಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಸೋಮಶೇಖರ್ ರೆಡ್ಡಿ ಅವರ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕವಾಗಿ ಚಾಕುವಿನಿಂದ ಇರಿದು ಪರಾರಿಯಾದ ಬೆಚ್ಚಿಬೀಳಿಸುವ ಘಟನೆ ನಡೆದಿದೆ.
ವಾಟರ್ ಪ್ಲಾಂಟ್ ಬಳಿ ಕ್ಯಾತೆ ತೆಗೆದು ಅಟ್ಯಾಕ್
ಸೋಮಶೇಖರ್ ರೆಡ್ಡಿ ಅವರು ಜಯನಗರದ 9ನೇ ಬ್ಲಾಕ್‌ನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು (ವಾಟರ್ ಪ್ಲಾಂಟ್) ನಡೆಸುತ್ತಿದ್ದರು. 24ನೇ ತಾರೀಖಿನ ಸಂಜೆ ಅವರು ತಮ್ಮ ವಾಟರ್ ಪ್ಲಾಂಟ್ ಬಳಿ ಇದ್ದಾಗ, ಆಟೋದಲ್ಲಿ ಮಾರಕಾಸ್ತ್ರಗಳ ಸಮೇತ ಬಂದ ಐವರು ಕಿಡಿಗೇಡಿಗಳ ತಂಡ ಉದ್ದೇಶಪೂರ್ವಕವಾಗಿ ಅವರೊಂದಿಗೆ ಕಿರಿಕ್ ತೆಗೆದಿದೆ.
ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ, ಕಿರಾತಕರು ಸೋಮಶೇಖರ್ ಅವರ ಹೊಟ್ಟೆ, ಎದೆ ಹಾಗೂ ಬೆನ್ನಿಗೆ ಚಾಕುವಿನಿಂದ ಮನಬಂದಂತೆ ಇರಿದು ಅಟ್ಟಹಾಸ ಮೆರೆದಿದ್ದಾರೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಅವರನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ದೊರೆತ ಕಾರಣ ಸೋಮಶೇಖರ್ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಐವರು ಆರೋಪಿಗಳ ಬಂಧನ
ಈ ಮಾರಣಾಂತಿಕ ಹಲ್ಲೆಗೆ ಸಂಬಂಧಿಸಿದಂತೆ ಗಾಯಾಳು ಸೋಮಶೇಖರ್ ಅವರ ತಂದೆ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದಿದ್ದ ಐವರ ತಂಡವು, ನನ್ನ ಮಗನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಈ ಅಟ್ಯಾಕ್ ಮಾಡಿದೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಜಯನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಹಲ್ಲೆ ನಡೆಸಿದ ಆರೋಪಿಗಳಾದ ರವಿ, ಬಾಲು, ಪುಲಿ, ವಿಷ್ಣು ಮತ್ತು ಶಂಕರ್ ಎಂಬ ಐವರನ್ನು ಈಗಾಗಲೇ ಬಂಧಿಸಿದ್ದಾರೆ.
ರಾಜಕೀಯ ದ್ವೇಷದ ಶಂಕೆ?
ಸೋಮಶೇಖರ್ ರೆಡ್ಡಿ ಅವರು ಬಿಜೆಪಿ ಪಕ್ಷದಲ್ಲಿ ಅತ್ಯಂತ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಮುಂಬರುವ ಜಿಬಿಎ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಭಾರಿ ತಯಾರಿ ಕೂಡ ನಡೆಸಿದ್ದರು. ಹೀಗಾಗಿ, ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರ ಬೆಳವಣಿಗೆಯನ್ನು ಸಹಿಸದ ವಿರೋಧಿಗಳು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ಯತ್ನ ನಡೆಸಿದ್ದಾರೆಯೇ ಎಂಬ ಬಲವಾದ ಅನುಮಾನಗಳು ವ್ಯಕ್ತವಾಗಿವೆ. ಪೊಲೀಸರು ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಘಟನೆಯ ಹಿಂದಿರುವ ನೈಜ ಕಾರಣವನ್ನು ಪತ್ತೆಹಚ್ಚುತ್ತಿದ್ದಾರೆ.
