S Shorts

Shocking News | ಮಗಳು ನಾಪತ್ತೆಯಾಗಿದ್ದಾಳೆಂದು ದೂರು ಕೊಟ್ಟ ತಂದೆಯ ಅಸಲಿ ಮುಖ ಬಯಲು: ಪ್ರೀತಿ ಮಾಡಿದ್ದಕ್ಕೆ ಮಗಳನ್ನೇ ಮುಗಿಸಿದ ಪಾಪಿ!

Shocking News | ಮಗಳು ನಾಪತ್ತೆಯಾಗಿದ್ದಾಳೆಂದು ದೂರು ಕೊಟ್ಟ ತಂದೆಯ ಅಸಲಿ ಮುಖ ಬಯಲು: ಪ್ರೀತಿ ಮಾಡಿದ್ದಕ್ಕೆ ಮಗಳನ್ನೇ ಮುಗಿಸಿದ ಪಾಪಿ!
Author: Sagaradventure
Posted By: Sagaradventure
Updated: May 17, 2026 | 7:21 PM

ತುಮಕೂರು: ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಹೆತ್ತ ತಂದೆಯೇ ತನ್ನ 17 ವರ್ಷದ ಮಗಳನ್ನು ಬರ್ಬರವಾಗಿ ಕೊ*ಲೆ ಮಾಡಿ, ಹಳ್ಳದಲ್ಲಿ ಹೂತು ಹಾಕಿರುವ ಬೆಚ್ಚಿಬೀಳಿಸುವ ಘಟನೆಯೊಂದು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿಂಬೆಮರದಹಳ್ಳಿಯಲ್ಲಿ ನಡೆದಿದೆ. ಮೇಘನಾ (17) ಕೊಲೆಯಾದ ದುರ್ದೈವಿ, ಈಕೆಯ ತಂದೆ ತಿಮ್ಮರಾಯಪ್ಪ (48) ಎಂಬಾತನೇ ಮರ್ಯಾದೆಗಾಗಿ ಈ ಭೀಕರ ಕೃತ್ಯವೆಸಗಿದ ಹಂತಕ.

​ಮೃ*ತ ಮೇಘನಾ ತನ್ನ ತಾಯಿಯ ಕಡೆಯ ಸಂಬಂಧಿಕರ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ, ಮಗಳ ಈ ಪ್ರೇಮ ಪ್ರಕರಣಕ್ಕೆ ತಂದೆ ತಿಮ್ಮರಾಯಪ್ಪನ ತೀವ್ರ ವಿರೋಧವಿತ್ತು. ಇದೇ ವಿಚಾರವಾಗಿ ಮನೆಯಲ್ಲಿ ಹಲವು ಬಾರಿ ಜಗಳ, ಗಲಾಟೆಗಳು ನಡೆದಿದ್ದವು.

ಮಗಳ ಪ್ರೇಮದ ಹಠದಿಂದ ತೀವ್ರ ಕೋಪಗೊಂಡಿದ್ದ ತಿಮ್ಮರಾಯಪ್ಪ, ಕಳೆದ ಏಪ್ರಿಲ್ 16 ರಂದು ಮೇಘನಾಳನ್ನು ಕೊ*ಲೆ ಮಾಡಿದ್ದಾನೆ. ಬಳಿಕ ಯಾರಿಗೂ ಅನುಮಾನ ಬಾರದಂತೆ ಜಮೀನಿನ ಪಕ್ಕದಲ್ಲಿರುವ ಹಳ್ಳವೊಂದರಲ್ಲಿ ಆಕೆಯ ಮೃ*ತದೇಹವನ್ನು ಹೂತು ಹಾಕಿದ್ದನು.

​ಕ್ರೂರವಾಗಿ ಮಗಳನ್ನು ಕೊಂದ ಬಳಿಕ ಏನೂ ಅರಿಯದವನಂತೆ ನಾಟಕವಾಡಿದ್ದ ಈತ, ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ಸಹ ನೀಡಿದ್ದನು. ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ತಿಮ್ಮರಾಯಪ್ಪನ ವರ್ತನೆ ಮೇಲೆ ಅನುಮಾನ ಮೂಡಿತ್ತು.

ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದಾಗ ಗಾಬರಿಗೊಂಡು ಆತ ತಲೆಮರೆಸಿಕೊಂಡಿದ್ದನು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ನಾಪತ್ತೆಯಾಗಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಳಿಕ ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಮರ್ಯಾದಾ ಹ*ತ್ಯೆಯ ಅಸಲಿ ಸತ್ಯ ಬಾಯ್ಬಿಟ್ಟಿದ್ದಾನೆ.