S Shorts

ರಾಕಿಂಗ್ ಸ್ಟಾರ್ ಅಖಾಡಕ್ಕೆ ಐವರು ಸುಂದರಿಯರ ಎಂಟ್ರಿ; ಜುಲೈ 1 ರಿಂದ ಶುರುವಾಗಲಿದೆ ‘ಟಾಕ್ಸಿಕ್’ ಲೇಡಿಸ್ ದರ್ಬಾರ್!

ರಾಕಿಂಗ್ ಸ್ಟಾರ್ ಅಖಾಡಕ್ಕೆ ಐವರು ಸುಂದರಿಯರ ಎಂಟ್ರಿ; ಜುಲೈ 1 ರಿಂದ ಶುರುವಾಗಲಿದೆ ‘ಟಾಕ್ಸಿಕ್’ ಲೇಡಿಸ್ ದರ್ಬಾರ್!
Author: Meghana Gowda
Posted By: Meghana Gowda
Updated: Jun 30, 2026 | 2:01 PM

ಬೆಂಗಳೂರು: ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಕುತೂಹಲ ಕೆರಳಿಸಿರುವ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಯ ಕೌಂಟ್‌ಡೌನ್ ಅಧಿಕೃತವಾಗಿ ಆರಂಭವಾಗಿದೆ. ಈಗಾಗಲೇ ಎರಡು ಬಾರಿ ರಿಲೀಸ್ ಡೇಟ್ ಬದಲಾವಣೆ ಕಂಡು, ಈಗ ಫೈನಲ್ ಡೇಟ್‌ಗೆ ಫಿಕ್ಸ್ ಆಗಿರುವ ಚಿತ್ರತಂಡ ಪ್ರಚಾರ ಕಾರ್ಯವನ್ನು ಜಾಗತಿಕ ಮಟ್ಟದಲ್ಲಿ ಗರಿಗೆದರಿಸಿದೆ. ಇದರ ಮೊದಲ ಹಂತವಾಗಿ ಚಿತ್ರದಲ್ಲಿರುವ ಐವರು ಖ್ಯಾತ ನಟಿಯರ ಪಾತ್ರಗಳನ್ನು ಅಖಾಡಕ್ಕಿಳಿಸಲು ವೇದಿಕೆ ಸಜ್ಜಾಗಿದ್ದು, ಜುಲೈ 1 ರಿಂದ ಸೋಶಿಯಲ್ ಮೀಡಿಯಾದಲ್ಲಿ ‘ಟಾಕ್ಸಿಕ್ ಲೇಡಿಸ್’ ಅಬ್ಬರ ಶುರುವಾಗಲಿದೆ [Toxic Movie Promotions].

‘ಟಾಕ್ಸಿಕ್’ ಚಿತ್ರದಲ್ಲಿ ಐವರು ಬಹುಭಾಷಾ ತಾರೆಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅವರ ಫಸ್ಟ್ ಲುಕ್ ಪೋಸ್ಟರ್‌ಗಳು ಈಗಾಗಲೇ ಭಾರಿ ಕ್ರೇಜ್ ಸೃಷ್ಟಿಸಿವೆ. ಇದೀಗ ಆ ಕುತೂಹಲವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಚಿತ್ರತಂಡ ಸಜ್ಜಾಗಿದೆ. ಜುಲೈ 1 ರಿಂದ ಐದೂ ಜನ ನಟಿಯರ ಪಾತ್ರ ಪರಿಚಯದ ಪ್ರತ್ಯೇಕ ಟೀಸರ್‌ಗಳು ಒಬ್ರಾದ್ಮೇಲೆ ಒಬ್ರಂತೆ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಸ್ವತಃ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ʼಕಾಮ್ ಡೌನ್.. ಲೇಡಿಸ್ ಟೇಕ್ ಟೈಂ ಟು ಕಮ್ʼ (Calm down.. ladies take time to come) ಎಂದು ಬರೆಯುವ ಮೂಲಕ ಅಭಿಮಾನಿಗಳಲ್ಲಿ ರೋಮಾಂಚನ ಹೆಚ್ಚು ಮಾಡಿದ್ದಾರೆ.

ಈಗಾಗಲೇ ಹೊರಬಿದ್ದಿರುವ ಮಾಹಿತಿಯಂತೆ, ಚಿತ್ರದಲ್ಲಿ ಕನ್ನಡದ ಬೆಡಗಿ ರುಕ್ಮಿಣಿ ವಸಂತ್ ‘ಮೆಲ್ಲಿಸಾ’ ಎಂಬ ಪಾತ್ರದಲ್ಲಿ ಮಿಂಚಿದ್ದಾರೆ. ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ‘ನಾಡಿಯಾ’ ಆಗಿ, ಲೇಡಿ ಸೂಪರ್‌ಸ್ಟಾರ್ ನಯನತಾರಾ ‘ಗಂಗಾ’ ಎಂಬ ಶಕ್ತಿಶಾಲಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರ ಜೊತೆಗೆ ಹುಮಾ ಖುರೇಶಿ ‘ಎಲಿಜೆಬೆತ್’ ಪಾತ್ರದಲ್ಲಿ ಹಾಗೂ ತಾರಾ ಸುತಾರಿಯಾ ‘ರೆಬೆಕಾ’ ಹೆಸರಿನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ ಯಶ್ ಅವರು ಈ ಚಿತ್ರದಲ್ಲಿ ‘ರಾಯ’ ಮತ್ತು ‘ಟಿಕೆಟ್’ ಎಂಬ ತಂದೆ-ಮಗನ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ನಾಳೆಯಿಂದ ಈ ಐವರು ಲೇಡಿಸ್ ಇಂಟ್ರಡಕ್ಷನ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ.