ಬಳ್ಳಾರಿ: ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಗಡಿ ಗುರುತುಗಳನ್ನು ನಾಶ ಮಾಡಿ ಅಕ್ರಮವಾಗಿ ಗಣಿಗಾರಿಕೆ (Mining)ನಡೆಸಿದ ಆರೋಪದ ಮೇಲೆ ಜನಾರ್ದನ ರೆಡ್ಡಿ (Janardhana Reddy) ಅವರ ವಿರುದ್ಧ ತನಿಖೆ ತೀವ್ರಗೊಂಡಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ರಚನೆಯಾಗಿದ್ದ ಸುಧಾಂಶು ದುಲಿಯಾ (Justice Sudhanshu Dhulia) ಸಮಿತಿಯು ನಡೆಸಿದ ದ್ರೋಣ್ ಸರ್ವೇಯಲ್ಲಿ ಒತ್ತುವರಿ ಪ್ರಕರಣ ಬಯಲಾಗಿದೆ.
ಗಡಿ ಮತ್ತು ದೇವಸ್ಥಾನ ಒತ್ತುವರಿ: ಸುಂಕ್ಲಮ್ಮ ದೇವಸ್ಥಾನದ ಬಳಿ ಕರ್ನಾಟಕದ ಗಡಿ ಹಾಗೂ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಅಕ್ರಮವಾಗಿ ಗಣಿಗಾರಿಕೆ ನಡೆಸಿರುವುದು ಸರ್ವೇಯಲ್ಲಿ ಪತ್ತೆಯಾಗಿದೆ. ಒತ್ತುವರಿ ಮಾಡಲಾದ ನಕ್ಷೆ ಮತ್ತು ದೇವಸ್ಥಾನದ ಹಳೆಯ ನಕ್ಷೆಯ ಪ್ರತಿಗಳು ಈಗ ತನಿಖಾ ತಂಡಕ್ಕೆ ಲಭ್ಯವಾಗಿವೆ.
ದ್ರೋಣ್ ಸರ್ವೇ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಗಣಿಗಾರಿಕೆಯ ವಿಸ್ತೀರ್ಣ, ಪರಿಸರದ ಮೇಲಾದ ಹಾನಿ ಮತ್ತು ಅಕ್ರಮ ಅದಿರು ಸಾಗಾಟದ ಬಗ್ಗೆ ಸಮಗ್ರ ತನಿಖೆ ನಡೆಸಲಾಗಿದೆ.
ಈ ವರದಿಯನ್ನು ಜನವರಿ ಮೊದಲ ವಾರದಲ್ಲಿ ಸಲ್ಲಿಸಬೇಕಿತ್ತು. ಆದರೆ, ಜನಾರ್ದನ ರೆಡ್ಡಿ ಅವರು ತಮ್ಮ ಪರವಾಗಿ ವಿವರಣೆ ನೀಡಲು ಜನವರಿ 20ರವರೆಗೆ ಕಾಲಾವಕಾಶ ಕೇಳಿರುವ ಹಿನ್ನೆಲೆಯಲ್ಲಿ, ವರದಿಯು ಜನವರಿ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ತಲುಪಲಿದೆ.
ಯಾವ್ಯಾವ ಗಣಿಗಳು ಎಷ್ಟು ಪ್ರದೇಶದಲ್ಲಿವೆ?
| ಕಂಪನಿ ಹೆಸರು | ಪ್ರದೇಶದ ವಿಸ್ತೀರ್ಣ (ಹೆಕ್ಟೇರ್) |
| OMC 1 (ಓಬಳಾಪುರಂ ಮೈನಿಂಗ್ ಕಂಪನಿ) | 25.98 |
| OMC 2 (ಓಬಳಾಪುರಂ ಮೈನಿಂಗ್ ಕಂಪನಿ) | 39.59 |
| OMC 3 (ಓಬಳಾಪುರಂ ಮೈನಿಂಗ್ ಕಂಪನಿ) | 68.52 (ಅತಿ ಹೆಚ್ಚು ಅಕ್ರಮದ ಆರೋಪ) |
| AMC (ಅನಂತಪುರಂ ಮೈನಿಂಗ್ ಕಂಪನಿ) | 6.50 |
| ಬಳ್ಳಾರಿ ಐರನ್ ಓರ್ ಪ್ರೈವೇಟ್ ಲಿಮಿಟೆಡ್ | 27.12 |
| ವೈ.ಮ. & ಸನ್ಸ್ | 20.24 |
ಇದರಲ್ಲಿ OMC 3 ಕಂಪನಿಯಲ್ಲೇ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂದು ಈ ಹಿಂದೆಯೇ ಸಿಬಿಐ ವರದಿ ನೀಡಿತ್ತು.
