ಬೆಂಗಳೂರು: ಮೊನ್ನೆ ಬಸ್ನಲ್ಲಿ ಕಳೆದುಹೋಗಿದ್ದ ನಗದು ವಾಪಸ್ ಬಂದ ಬೆನ್ನಲ್ಲೇ, ಈಗ ರೈಲ್ವೆ ಸುರಕ್ಷತಾ ಪಡೆಯ (RPF) ಸಮಯಪ್ರಜ್ಞೆಯಿಂದಾಗಿ ಪ್ರಯಾಣಿಕರೊಬ್ಬರು ತಮ್ಮ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಮರಳಿ ಪಡೆದಿದ್ದಾರೆ.
ಘಟನೆಯ ಹಿನ್ನೆಲೆ:
ಫೆಬ್ರವರಿ 8ರಂದು ರಾತ್ರಿ 8.35ರ ಸುಮಾರಿಗೆ ಪ್ರಯಾಣಿಕರೊಬ್ಬರು (Passenger) ಯಲಹಂಕ ರೈಲು ನಿಲ್ದಾಣದಲ್ಲಿ (Yelahanka Railway Station) ತಮ್ಮ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಅನ್ನು ಮರೆತು ಬಿಟ್ಟಿದ್ದರು. ಕೂಡಲೇ ಎಚ್ಚೆತ್ತ ಪ್ರಯಾಣಿಕರು ‘ರೈಲ್ ಮದದ್’ (Rail Madad) ಆಪ್ ಮೂಲಕ ದೂರು ದಾಖಲಿಸಿದ್ದರು.
ದೂರು ಬಂದ ತಕ್ಷಣ ಕಾರ್ಯಪ್ರವೃತ್ತರಾದ ಯಲಹಂಕ ಆರ್ಪಿಎಫ್ ಸಿಬ್ಬಂದಿ ನಿಲ್ದಾಣದ 1ನೇ ಪ್ಲಾಟ್ಫಾರ್ಮ್ನಲ್ಲಿ ಶೋಧ ನಡೆಸಿ, ವಾರಸುದಾರರಿಲ್ಲದ ಕೆಂಪು ಟ್ರಾಲಿ ಬ್ಯಾಗ್ ಅನ್ನು ಪತ್ತೆಹಚ್ಚಿದರು. ಪತ್ತೆಯಾದ ಬ್ಯಾಗ್ ಅನ್ನು ಪರೀಕ್ಷಿಸಿದಾಗ ಅದರಲ್ಲಿ ಸುಮಾರು 17 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ರೂಪಾಯಿ ನಗದು ಇರುವುದು ಕಂಡುಬಂದಿದೆ. ಒಟ್ಟು ₹19 ಲಕ್ಷ ಮೌಲ್ಯದ ಸೊತ್ತು ಸುರಕ್ಷಿತವಾಗಿತ್ತು.
ದೂರುದಾರರ ಆಧಾರ್ ಕಾರ್ಡ್ ಮತ್ತು ರೈಲ್ ಮದದ್ ವಿವರಗಳನ್ನು ಪರಿಶೀಲಿಸಿದ ಬಳಿಕ, ಸೂಕ್ತ ಕಾನೂನು ಪ್ರಕ್ರಿಯೆ ಮುಗಿಸಿ ಬ್ಯಾಗ್ ಅನ್ನು ಅವರ ಮಾಲೀಕರಿಗೆ ಹಸ್ತಾಂತರಿಸಲಾಯಿತು. ತಮ್ಮ ಅಮೂಲ್ಯವಾದ ಆಭರಣ ಮತ್ತು ನಗದನ್ನು ಮರಳಿ ಪಡೆದ ಪ್ರಯಾಣಿಕರು ಆರ್ಪಿಎಫ್ ಸಿಬ್ಬಂದಿಯ ತ್ವರಿತ ಗತಿ ಮತ್ತು ಪ್ರಾಮಾಣಿಕತೆಗೆ ತುಂಬು ಹೃದಯದ ಧನ್ಯವಾದ ಅರ್ಪಿಸಿದ್ದಾರೆ.
