ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ನಡೆದಿದ್ದೇನು?:
ದಿಗಂತ್ ಬಿ.ಕೆ ಎಂಬಾತ ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ‘ಬೆಂಗಳೂರು ಮೆಟ್ರೋ ಚಿಕ್ಸ್’ ಎಂಬ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುತ್ತಿದ್ದ. ಈ ಬಗ್ಗೆ ಬನಶಂಕರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದರು. 14 ವಿಡಿಯೋ ಪೋಸ್ಟ್ ಮಾಡಿದ್ದ ಆರೋಪಿ ವಿರುದ್ಧ FIR ದಾಖಲಿಸಿದ್ದರು. 2025ರ ಮೇ ತಿಂಗಳಲ್ಲಿ ಬಿ.ಕೆ. ದಿಗಂತ್ನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದರು. ಬೆಂಗಳೂರಿನ ಹೆಚ್ಚುವರಿ ಸಿಜೆಎಂ ನ್ಯಾಯಾಲಯದಲ್ಲಿ ಈತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 78(2), 238(ಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ‘ಬೆಂಗಳೂರು ಮೆಟ್ರೋ ಚಿಕ್ಸ್’ ಎಂಬ ಇನ್‌ಸ್ಟಾಗ್ರಾಮ್ ಖಾತೆ ಹೊಂದಿದ್ದ ದಿಗಂತ್.ಬಿ.ಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ತಿರಸ್ಕರಿಸಿದೆ. ‘ನೀವು ಮಹಿಳೆಯರ ಮುಂಭಾಗ ಮತ್ತು ಹಿಂಭಾಗದಿಂದ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಅದನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕುತ್ತೀರಾ, ಯಾವ ರೀತಿಯ ಮನುಷ್ಯರು ನೀವು? ಮೆಟ್ರೋದಲ್ಲಿ ಮಾತ್ರವಲ್ಲ, ಮಹಿಳೆಯರನ್ನು ಎಲ್ಲಿಯೂ ಸುರಕ್ಷಿತವಾಗಿರಲು ನೀವು ಬಿಡುವುದಿಲ್ಲ, ನಾಚಿಕೆಯಾಗಲ್ವಾ’ ಎಂದು ಕಿಡಿಕಾರಿದೆ.
ಮಹಿಳೆಯರನ್ನು ಅವರ ಅನುಮತಿಯಿಲ್ಲದೆ ಅಶ್ಲೀಲವಾಗಿ ಚಿತ್ರೀಕರಿಸಿ ಸೋಶಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡುವುದು ಅಪರಾಧವಲ್ಲದೆ ಮತ್ತೇನು? ಎಂದು ಖಾರವಾಗಿ ಪ್ರಶ್ನಿಸಿದ ಪೀಠ, ಆರೋಪಿಯ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
