ಬೆಂಗಳೂರಿನಲ್ಲಿ ಪ್ರಾಣಿ ತ್ಯಾಜ್ಯ ಸಂಗ್ರಹಣೆ ಹಾಗೂ ಸಂಸ್ಕರಣೆಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಹೊರಡಿಸಿದ್ದ ಸಾರ್ವಜನಿಕ ಪ್ರಕಟಣೆಗೆ ಕರ್ನಾಟಕ ಹೈಕೋರ್ಟ್ ಶನಿವಾರ ತಡೆಯಾಜ್ಞೆ ನೀಡಿದೆ. ಕೋಳಿ, ಕುರಿ, ಮೀನು ಹಾಗೂ ಇತರೆ ಪ್ರಾಣಿಗಳ ತ್ಯಾಜ್ಯ ಮತ್ತು ಮೂಳೆಗಳ ವೈಜ್ಞಾನಿಕ ಸಂಗ್ರಹಣೆ, ಸಾಗಾಟ ಹಾಗೂ ಸಂಸ್ಕರಣೆಗೆ ಸಂಬಂಧಿಸಿದಂತೆ ಪ್ರಾಧಿಕಾರವು ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿತ್ತು. ಈ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಪೀಠವು ಈ ಮಧ್ಯಂತರ ಆದೇಶವನ್ನು ಹೊರಡಿಸಿದೆ.
ಬೃಹತ್ ಬೆಂಗಳೂರು ಪ್ರಾಧಿಕಾರವು ಹೊರಡಿಸಿದ್ದ ವಿವಾದಾತ್ಮಕ ಪ್ರಕಟಣೆಯಲ್ಲಿ ಪ್ರಾಣಿ ತ್ಯಾಜ್ಯಕ್ಕೆ ಪ್ರತಿ ಕೆಜಿಗೆ 5 ರೂಪಾಯಿ ಹಾಗೂ ಮೂಳೆ ತ್ಯಾಜ್ಯಕ್ಕೆ ಪ್ರತಿ ಕೆಜಿಗೆ 3 ರೂಪಾಯಿ ಸೇವಾ ಶುಲ್ಕವನ್ನು ನಿಗದಿಪಡಿಸಲಾಗಿತ್ತು. ಅಲ್ಲದೆ, ವ್ಯಾಪಾರಿಗಳು ಕಡ್ಡಾಯವಾಗಿ ಪ್ರಾಧಿಕಾರದಿಂದ ಅಧಿಸೂಚಿತಗೊಂಡ ಖಾಸಗಿ ಸೇವಾ ಪೂರೈಕೆದಾರರಿಗೆ ಮಾತ್ರ ತ್ಯಾಜ್ಯವನ್ನು ಹಸ್ತಾಂತರಿಸಬೇಕು ಎಂದು ಸೂಚಿಸಲಾಗಿತ್ತು. ಈ ನಿಯಮಗಳನ್ನು ಉಲ್ಲಂಘಿಸಿದರೆ 2000 ದಿಂದ 3000 ರೂಪಾಯಿಗಳವರೆಗೆ ದಂಡ ವಿಧಿಸುವುದರ ಜೊತೆಗೆ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸುವ ಎಚ್ಚರಿಕೆಯನ್ನೂ ನೋಟಿಸ್‌ನಲ್ಲಿ ನೀಡಲಾಗಿತ್ತು.
ಪ್ರಾಧಿಕಾರದ ಈ ಕ್ರಮವು ಬೃಹತ್ ಬೆಂಗಳೂರು ಆಡಳಿತ ಕಾಯ್ದೆ ಹಾಗೂ ಸಂವಿಧಾನವು ಖಾತರಿಪಡಿಸಿರುವ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಪ್ರಸ್ತುತ ಹಲವು ಪೌಲ್ಟ್ರಿ ಮಾಂಸ ಕೇಂದ್ರಗಳು ತಾವು ಉತ್ಪಾದಿಸುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಈಗಾಗಲೇ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡಿವೆ.
ಪಶು ಆಹಾರ ತಯಾರಿಸುವ ಫಾರ್ಮಾಸ್ಯುಟಿಕಲ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಕೇಂದ್ರಗಳು, ತ್ಯಾಜ್ಯವನ್ನು ಪ್ಯಾಕ್ ಮಾಡಿ ಕೇವಲ 8 ಗಂಟೆಗಳ ಒಳಗೆ ನಿಗದಿತ ಪ್ರತಿನಿಧಿಗಳಿಗೆ ಹಸ್ತಾಂತರಿಸುತ್ತಿವೆ. ಪ್ರಾಧಿಕಾರ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಬೆಲೆಗೆ ಈ ತ್ಯಾಜ್ಯವು ಕೈಗಾರಿಕೆಗಳಿಗೆ ಮಾರಾಟವಾಗುತ್ತಿದ್ದು, ಇತರ ತ್ಯಾಜ್ಯಗಳಿಗೂ ಇದೇ ರೀತಿಯ ವ್ಯವಸ್ಥೆಯಿದೆ ಎಂದು ವಿವರಿಸಿದರು.
ಅರ್ಜಿದಾರರ ವಾದವನ್ನು ಆಲಿಸಿದ ನ್ಯಾಯಾಲಯವು, ಈ ಪ್ರಕ್ರಿಯೆಗಳನ್ನು ಪರಿಗಣಿಸದೆ ಪ್ರಾಧಿಕಾರವು ನೋಟಿಸ್ ಪ್ರಕಟಿಸಿದ್ದರೆ, ವ್ಯಾಪಾರಿಗಳಿಗೆ ತಮ್ಮ ಅಹವಾಲು ಸಲ್ಲಿಸಲು ಮುಕ್ತ ಅವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟು ಮುಂದಿನ ವಿಚಾರಣೆಯನ್ನು ನವೆಂಬರ್ 5 ಕ್ಕೆ ಮುಂದೂಡಿದೆ.
