ಹಾಸನ: ಸಾರಿಗೆ ಬಸ್‌ನ ಟಿಕೆಟ್ ಪರಿಶೀಲನೆಗೆ ತೆರಳುತ್ತಿದ್ದ ಹಿರಿಯ ಅಧಿಕಾರಿಯೊಬ್ಬರಿಗೆ ವೇಗವಾಗಿ ಬಂದ ಕ್ಯಾಂಟರ್ (Canter) ಡಿಕ್ಕಿ ಹೊಡೆದು, ಅವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ.
ಆಲೂರು (Alur) ತಾಲೂಕಿನ ಪಾಳ್ಯ (Palya) ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 75 (NH 75) ರಲ್ಲಿ ಈ ಘಟನೆ ಸಂಭವಿಸಿದೆ. ಮೃತರನ್ನು ಸಾರಿಗೆ ಇಲಾಖೆಯ ಚೆಕಿಂಗ್ ಇನ್ಸ್‌ಪೆಕ್ಟರ್ ಆದ ಶಕುನಿಗೌಡ (57) ಎಂದು ಗುರುತಿಸಲಾಗಿದೆ.
ಶಕುನಿಗೌಡ ಅವರು ನಲ್ಲೂರು-ಮಗ್ಗೆ ಮಾರ್ಗದಲ್ಲಿ ಸಾರಿಗೆ ಬಸ್ ಅನ್ನು ತಡೆದು ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸಲು ತೆರಳುತ್ತಿದ್ದರು. ಈ ವೇಳೆ ಅತ್ಯಂತ ವೇಗವಾಗಿ ಬಂದ ಕ್ಯಾಂಟರ್ ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತ ಸಂಭವಿಸಿದ ಕೂಡಲೇ ಚಾಲಕ ಕ್ಯಾಂಟರ್ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳೀಯರ ಮಾಹಿತಿ ಮೇರೆಗೆ ಆಲೂರು ಪೊಲೀಸ್ ಠಾಣೆ (Alur Police Station) ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಿಟ್ ಅಂಡ್ ರನ್ (Hit and Run) ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾದ ಕ್ಯಾಂಟರ್ ಚಾಲಕನಿಗಾಗಿ ಹುಡುಕಾಟ ತೀವ್ರಗೊಳಿಸಿದ್ದಾರೆ.
