S Shorts

ರಾಜ್ಯದಲ್ಲಿ 5 IAS ಅಧಿಕಾರಿಗಳ ವರ್ಗಾವಣೆ: ಪಶ್ಚಿಮ ಬೆಂಗಳೂರು ಪಾಲಿಕೆ ಆಯುಕ್ತರಾಗಿ ಶಿಲ್ಪಾ ನಾಗ್ ನೇಮಕ

ರಾಜ್ಯದಲ್ಲಿ 5 IAS ಅಧಿಕಾರಿಗಳ ವರ್ಗಾವಣೆ: ಪಶ್ಚಿಮ ಬೆಂಗಳೂರು ಪಾಲಿಕೆ ಆಯುಕ್ತರಾಗಿ ಶಿಲ್ಪಾ ನಾಗ್ ನೇಮಕ
Author: Sagaradventure
Posted By: Sagaradventure
Updated: Oct 31, 2026 | 8:01 AM

ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮತ್ತಷ್ಟು ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಐವರು ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅಕ್ಟೋಬರ್ 30ರಂದು ಮಹತ್ವದ ಆದೇಶ ಹೊರಡಿಸಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಹುದ್ದೆಗಳ ಭರ್ತಿ ಹಾಗೂ ಕೆಲವು ಮಾರ್ಪಾಡುಗಳೊಂದಿಗೆ ಈ ವರ್ಗಾವಣೆ ಪ್ರಕ್ರಿಯೆ ನಡೆದಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಅಧಿಸೂಚನೆಯಲ್ಲಿ ತಿಳಿಸಿದೆ.

​ಶಿಲ್ಪಾ ನಾಗ್, ವೆಂಕಟ್ ರಾಜಾಗೆ ಪ್ರಮುಖ ಜವಾಬ್ದಾರಿ

​ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ) ವಿಶೇಷ ಆಯುಕ್ತೆಯಾಗಿದ್ದ ಶಿಲ್ಪಾ ನಾಗ್ ಸಿ.ಟಿ. ಅವರನ್ನು ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ. ಈ ಜಾಗದಲ್ಲಿದ್ದ ಡಾ. ರಾಜೇಂದ್ರ ಕೆ.ವಿ. ಅವರು ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದರಿಂದ ಶಿಲ್ಪಾ ನಾಗ್ ಅವರನ್ನು ನೇಮಿಸಲಾಗಿದೆ. ಇನ್ನು ಹುದ್ದೆಯ ನಿರೀಕ್ಷೆಯಲ್ಲಿದ್ದ ವೆಂಕಟ್ ರಾಜಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಂಚಾಯತ್ ರಾಜ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

​ಇತರೆ ಅಧಿಕಾರಿಗಳ ವರ್ಗಾವಣೆ ವಿವರ:

* ​ಸುರಳ್ಕರ್ ವಿಕಾಸ್ ಕಿಶೋರ್: ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಇವರನ್ನು ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ.
* ​ಕೆ.ಎ. ದಯಾನಂದ್: ಅಕ್ಟೋಬರ್ 17ರಂದು ಹೊರಡಿಸಿದ್ದ ವರ್ಗಾವಣೆ ಆದೇಶದಲ್ಲಿ ಮಾರ್ಪಾಡು ಮಾಡಲಾಗಿದ್ದು, ದಯಾನಂದ್ ಅವರು ಕರ್ನಾಟಕ ಗೃಹ ಮಂಡಳಿ (KHB) ಆಯುಕ್ತರಾಗಿ ಮುಂದುವರಿಯಲಿದ್ದಾರೆ.
* ​ಶಿಂಧೆ ಅವಿನಾಶ್ ಸಂಜೀವನ್: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಇವರನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (KKRDB) ಉಪ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಇದರ ಜೊತೆಗೆ, ಕಲಬುರಗಿ ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತರ ಹೆಚ್ಚುವರಿ ಜವಾಬ್ದಾರಿಯನ್ನೂ ಇವರಿಗೆ ವಹಿಸಲಾಗಿದೆ.