S Shorts

ಜೋಶಿಮಠ ಹೆಲಿಕಾಪ್ಟರ್ ದುರಂತ: ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ಬೆಂಗಳೂರು CCB ಇನ್ಸ್‌ಪೆಕ್ಟರ್ ಸೇರಿ ಐವರ ದುರ್ಮರಣ!

ಜೋಶಿಮಠ ಹೆಲಿಕಾಪ್ಟರ್ ದುರಂತ: ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ಬೆಂಗಳೂರು CCB ಇನ್ಸ್‌ಪೆಕ್ಟರ್ ಸೇರಿ ಐವರ ದುರ್ಮರಣ!
Author: Sagaradventure
Posted By: Sagaradventure
Updated: Oct 30, 2026 | 5:36 PM

ಬೆಂಗಳೂರು: ಉತ್ತರಾಖಂಡದ ಜೋಶಿಮಠ ಕಣಿವೆಯಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಬೆಂಗಳೂರಿನ ಸಿಸಿಬಿ (CCB) ಇನ್ಸ್‌ಪೆಕ್ಟರ್ ಸೇರಿ ಐವರು ಕನ್ನಡಿಗರು ದುರ್ಮರಣವಪ್ಪಿದ್ದಾರೆ. ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ಐವರು ಸ್ನೇಹಿತರು ಹಾಗೂ ಪೈಲಟ್ ಸೇರಿ ಹೆಲಿಕಾಪ್ಟರ್‌ನಲ್ಲಿದ್ದ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ.

ದುರಂತದ ಹಿನ್ನೆಲೆ ಹಾಗೂ ಕಾರ್ಯಾಚರಣೆ: 

ಮಧ್ಯಾಹ್ನ 1:14ಕ್ಕೆ ಟೇಕಾಫ್ ಆಗಿದ್ದ ‘ಟ್ರಾನ್ಸ್ ಭಾರತ್ ಏವಿಯೇಷನ್’ ಸಂಸ್ಥೆಯ ಹೆಲಿಕಾಪ್ಟರ್, ಜೋಶಿಮಠ ಕಣಿವೆಯ ಮೇಲೆ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ ಸಂಪರ್ಕ ಕಡಿತಗೊಂಡಿತ್ತು. ಟ್ರ್ಯಾಕಿಂಗ್ ಸಿಸ್ಟಮ್‌ನಿಂದಲೂ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಕೂಡಲೇ ಭಾರತೀಯ ಸೇನೆ, ಚಮೋಲಿ ಜಿಲ್ಲಾಡಳಿತ ಹಾಗೂ ಎಸ್‌ಡಿಆರ್‌ಎಫ್ (SDRF) ತಂಡಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ದುರಂತದ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ತನ್ನೆಲ್ಲಾ ಹೆಲಿಕಾಪ್ಟರ್‌ಗಳ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಅಂತಿಮವಾಗಿ ಹೆಲಿಕಾಪ್ಟರ್ ಪತನಗೊಂಡಿರುವುದು ದೃಢಪಟ್ಟಿದೆ.

ಮೃತಪಟ್ಟ ಕನ್ನಡಿಗರು ಯಾರು?: 

ಹೆಲಿಕಾಪ್ಟರ್‌ನಲ್ಲಿ ಪೈಲಟ್ ಕ್ಯಾಪ್ಟನ್ ಹಿಮಾಂಶು ಅವರೊಂದಿಗೆ, ಕರ್ನಾಟಕದ ಐವರು ಸ್ನೇಹಿತರಾದ ಇನ್ಸ್‌ಪೆಕ್ಟರ್ ಅರುಣ್, ವಕೀಲರಾದ ಸುಧೀರ್ ಕೆ., ಪ್ರತಾಪ್, ಶಂಕರ್ ಗೌಡ ಹಾಗೂ ಹೆಚ್.ಎಸ್. ನಟರಾಜ ಅವರು ಪ್ರಯಾಣಿಸುತ್ತಿದ್ದರು. ಈ ಐವರು ಸ್ನೇಹಿತರು ಒಟ್ಟಾಗಿ ಚಾರ್‌ಧಾಮ್ ಪ್ರವಾಸಕ್ಕೆ ತೆರಳಿದ್ದಾಗ ಈ ದುರಂತ ಸಂಭವಿಸಿದೆ.

ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾಲುಂಕೆ ನಿಧನ: 

ಮೃತರಲ್ಲಿ ಬೆಂಗಳೂರಿನ ರಾಮಮೂರ್ತಿನಗರದ ನಿವಾಸಿ, ಹಾಲಿ ಸಿಸಿಬಿ ಇನ್ಸ್‌ಪೆಕ್ಟರ್ ಆಗಿದ್ದ ಅರುಣ್ ಸಾಲುಂಕೆ ಸೇರಿದ್ದಾರೆ. 2007ನೇ ಬ್ಯಾಚ್‌ನ ಪೊಲೀಸ್ ಅಧಿಕಾರಿಯಾಗಿದ್ದ ಅರುಣ್ ಸಾಲುಂಕೆ ಅವರು ಈ ಹಿಂದೆ ಇಂದಿರಾನಗರ, ಬಾಣಸವಾಡಿ, ಸಿಸಿಬಿ ಸೇರಿದಂತೆ ಹಲವು ಠಾಣೆಗಳಲ್ಲಿ ದಕ್ಷತೆಯಿಂದ ಸೇವೆ ಸಲ್ಲಿಸಿದ್ದರು. ಮೃತ ಅರುಣ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ಘಟನೆಯಿಂದ ಪೊಲೀಸ್ ಇಲಾಖೆ ಹಾಗೂ ಮೃತರ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ.