ನವದೆಹಲಿ: ಈ ವರ್ಷದ ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಭಾರತೀಯ ಹವಾಮಾನ ಇಲಾಖೆ (IMD) ನಿರಾಸೆಯ ಸುದ್ದಿಯೊಂದನ್ನು ನೀಡಿದೆ. ದಕ್ಷಿಣ-ಪಶ್ಚಿಮ ಮುಂಗಾರು ಮಳೆಯ ಮುನ್ಸೂಚನೆಯನ್ನು ಪರಿಷ್ಕರಿಸಿರುವ ಹವಾಮಾನ ಇಲಾಖೆಯು, 2026ರ ಸಾಲಿನ ಹಂಗಾಮಿ ಮಳೆಯ ಪ್ರಮಾಣವನ್ನು ದೀರ್ಘಾವಧಿ ಸರಾಸರಿಯ (LPA) ಶೇಕಡಾ 92 ರಿಂದ ಶೇಕಡಾ 90ಕ್ಕೆ ಇಳಿಕೆ ಮಾಡಿದೆ. ಇದರ ನೇರ ಪರಿಣಾಮವಾಗಿ ದೇಶಾದ್ಯಂತ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದ್ದು, ಇದರ ಜೊತೆಗೆ ವಿಪರೀತ ಉಷ್ಣಾಂಶ ಹಾಗೂ ಹೆಚ್ಚುವರಿ ಉಷ್ಣ ಅಲೆ (ಹೀಟ್‌ವೇವ್) ದಿನಗಳು ಜನರನ್ನು ಹೈರಾಣಾಗಿಸುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಶೇಕಡಾ 90 ರಷ್ಟು ಮಾತ್ರ ಮಳೆ
ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇರುವ ದಕ್ಷಿಣ-ಪಶ್ಚಿಮ ಮುಂಗಾರು ಮಳೆಯ ಎರಡನೇ ಹಂತದ ದೀರ್ಘಾವಧಿ ಮುನ್ಸೂಚನೆಯ ಪ್ರಕಾರ, ದೇಶದ ಬಹುಪಾಲು ಪ್ರದೇಶಗಳಲ್ಲಿ ಸರಾಸರಿ ಶೇಕಡಾ 90 ರಷ್ಟು ಮಾತ್ರ ಮಳೆಯಾಗಲಿದೆ. ಭೌಗೋಳಿಕವಾಗಿ ಗಮನಿಸುವುದಾದರೆ, ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಮಾತ್ರ ಶೇಕಡಾ 94 ರಿಂದ 106 ರಷ್ಟು ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದೆ.
ಆದರೆ, ದಕ್ಷಿಣ ದ್ವೀಪಕಲ್ಪ ಹಾಗೂ ಮಧ್ಯ ಭಾರತದಲ್ಲಿ ಶೇಕಡಾ 94 ಕ್ಕಿಂತ ಕಡಿಮೆ ಹಾಗೂ ವಾಯುವ್ಯ ಭಾರತದಲ್ಲಿ ಶೇಕಡಾ 92 ಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ. ದೀರ್ಘಾವಧಿ ಸರಾಸರಿಯ ಶೇಕಡಾ 89 ಕ್ಕಿಂತ ಕಡಿಮೆ ಮಳೆಯಾದರೆ ಅದನ್ನು ಕಡಿಮೆ ಮಳೆ ಎಂದು ಹಾಗೂ 90 ರಿಂದ 95 ಶೇಕಡಾ ಮಳೆಯಾದರೆ ಸಾಮಾನ್ಯಕ್ಕಿಂತ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಈ ಬಾರಿ ದೇಶದಲ್ಲಿ ಮಳೆ ಕೊರತೆ ಎದುರಾಗುವ ದಟ್ಟ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಎಲ್ ನಿನೋ ಪರಿಣಾಮ ಮಾನ್ಸೂನ್ ವಿಳಂಬ
ಮಳೆಯ ಪ್ರಮಾಣ ಕುಸಿಯುವುದರ ಜೊತೆಗೆ ಈ ಬಾರಿ ಮುಂಗಾರು ಆಗಮನವೂ ವಿಳಂಬವಾಗುತ್ತಿದೆ. ಆರಂಭದಲ್ಲಿ ಮೇ 26 ರಂದೇ ಕೇರಳ ಕರಾವಳಿಗೆ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿತ್ತು. ಆದರೆ, ವಾಡಿಕೆಯಂತೆ ಜೂನ್ 1 ರ ಸುಮಾರಿಗೆ ಮುಂಗಾರು ಪ್ರವೇಶಿಸುವ ಸಾಧ್ಯತೆಗಳಿದ್ದು, ಆಗಮನದಲ್ಲಿ ಕನಿಷ್ಠ ಒಂದು ವಾರ ತಡವಾಗುವ ಲಕ್ಷಣಗಳಿವೆ. ಇದಕ್ಕೆ ಪ್ರಮುಖ ಕಾರಣ ಎಲ್ ನಿನೋ ಪರಿಣಾಮವಾಗಿದ್ದು, ಮುಂಗಾರು ಅವಧಿಯಲ್ಲಿ ದುರ್ಬಲದಿಂದ ಮಧ್ಯಮ ಮಟ್ಟದ ಎಲ್ ನಿನೋ ಪ್ರಭಾವ ಮುಂದುವರಿಯಲಿದೆ ಹಾಗೂ ಮುಂಗಾರಿನ ಬಳಿಕ ಇದು ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ.
ಜೂನ್ 2026 ರ ತಿಂಗಳ ವಾಡಿಕೆ ಮಳೆಯ ಪ್ರಮಾಣ 166.9 ಮಿ.ಮೀ ಆಗಿದ್ದರೂ, ಈ ಬಾರಿ ದೇಶದಾದ್ಯಂತ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ. ಕೇವಲ ತೆಲಂಗಾಣ, ಆಂಧ್ರಪ್ರದೇಶ, ಈಶಾನ್ಯ ಭಾರತ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳಲ್ಲಿ ಮಾತ್ರ ವಾಡಿಕೆ ಮಳೆಯಾಗುವ ನಿರೀಕ್ಷೆಯಿದೆ.
ಮಳೆ ಕೊರತೆಯ ಬೆನ್ನಲ್ಲೇ ಜೂನ್ ತಿಂಗಳಲ್ಲಿ ಉಷ್ಣ ಅಲೆಯ ಪ್ರಭಾವ ಗಣನೀಯವಾಗಿ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೇಶದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚಿನ ತಾಪಮಾನ ದಾಖಲಾಗಲಿದ್ದು, 2 ರಿಂದ 3 ದಿನಗಳ ಕಾಲ ಹೆಚ್ಚುವರಿ ಉಷ್ಣ ಅಲೆಯ ಪರಿಸ್ಥಿತಿ ನಿರ್ಮಾಣವಾಗಲಿದೆ. ಪ್ರಮುಖವಾಗಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಗುಜರಾತ್ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಬಿಸಿಲಿನ ಝಳ ಹೆಚ್ಚಾಗಲಿದ್ದು, ಜನತೆ ಎಚ್ಚರಿಕೆಯಿಂದ ಇರುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
