ವಿಶ್ವಸಂಸ್ಥೆಯ ವರದಿಗಾರ (UN rapporteur) ಸಿದ್ಧಪಡಿಸಿದ ಭಯೋತ್ಪಾದನೆ ನಿಗ್ರಹದ ಕುರಿತಾದ ವರದಿಯಲ್ಲಿ ತೋರಿರುವ ಪಕ್ಷಪಾತವನ್ನು ಭಾರತ ತೀವ್ರವಾಗಿ ಖಂಡಿಸಿದೆ. ವರದಿಗಾರ ಬೆನ್ ಸೌಲ್ (Ben Saul) ಅವರ ಈ ವರದಿಯಲ್ಲಿ ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ (Dawood Ibrahim) ನೇತೃತ್ವದ ಡಿ-ಕಂಪನಿಯನ್ನು “ಭಾರತ ಮೂಲದ” (India-based) ಕ್ರಿಮಿನಲ್ ಗ್ಯಾಂಗ್ ಎಂದು ಉಲ್ಲೇಖಿಸಲಾಗಿದೆ.
ಇದಕ್ಕೆ ವಿಶ್ವಸಂಸ್ಥೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತೀಯ ರಾಜತಾಂತ್ರಿಕ ರಘು ಪುರಿ (Raghoo Puri), ವರದಿಯಲ್ಲಿರುವ ವಾಸ್ತವಿಕ ತಪ್ಪುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. “1993ರ ಭಯೋತ್ಪಾದಕ ದಾಳಿಗಳಿಂದಲೂ ದಾವೂದ್ ಇಬ್ರಾಹಿಂ ಭಾರತಕ್ಕೆ ಬೇಕಾಗಿರುವ ಕ್ರಿಮಿನಲ್ ಆಗಿದ್ದಾನೆ. ಆತ 2003ರಲ್ಲಿ ವಿಶ್ವಸಂಸ್ಥೆ ನಿರ್ಬಂಧ ಹೇರುವ ಮುನ್ನವೇ ಭಾರತದಿಂದ ಪರಾರಿಯಾಗಿದ್ದನು. ವಿಶ್ವಸಂಸ್ಥೆಯ ದಾಖಲೆಗಳ ಪ್ರಕಾರವೇ, ಒಸಾಮಾ ಬಿನ್ ಲಾಡೆನ್ ಅಡಗಿದ್ದ ಅದೇ ದೇಶದಲ್ಲಿ (ಪಾಕಿಸ್ತಾನ) ಆತ ಈಗಲೂ ವಾಸಿಸುತ್ತಿದ್ದಾನೆ” ಎಂದು ಸ್ಪಷ್ಟಪಡಿಸುವ ಮೂಲಕ ವಿಶ್ವಸಂಸ್ಥೆಯ ತಪ್ಪುಗಳನ್ನು ತಿದ್ದಿದರು.
ಭಯೋತ್ಪಾದಕರು ಮತ್ತು ತೀವ್ರಗಾಮಿ ಕೃತ್ಯ ಎಸಗುವವರನ್ನು ರಕ್ಷಿಸಲು ‘ಮಾನವ ಹಕ್ಕುಗಳ’ ನೆಪವನ್ನು ಬಳಸಿಕೊಳ್ಳುತ್ತಿರುವುದನ್ನೂ ಅವರು ತೀವ್ರವಾಗಿ ಖಂಡಿಸಿದರು.
ಪಾಕಿಸ್ತಾನಕ್ಕೆ ತಿರುಗೇಟು: ಇದೇ ವೇಳೆ, ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಭಾರತದ ಅವಿಭಾಜ್ಯ ಅಂಗಗಳಾಗಿದ್ದು, ಅವು ಎಂದೆಂದಿಗೂ ಹಾಗೆಯೇ ಉಳಿಯಲಿವೆ. ಪಾಕಿಸ್ತಾನದ ಪ್ರತಿನಿಧಿಗಳು ನೀಡಿದ ಹೇಳಿಕೆಯು ಅವರ ಸಂಕುಚಿತ ರಾಜಕೀಯ ಲಾಭಕ್ಕಾಗಿ ಹಾಗೂ ಪಾಕ್ ಸೇನೆಯ ಹಿತಾಸಕ್ತಿಗಾಗಿ ಮಾಡಿರುವ ಕೇವಲ ‘ಪ್ರಚಾರದ ತಂತ್ರ’ (Propaganda) ಎಂದು ರಘು ಪುರಿ ವಾಗ್ದಾಳಿ ನಡೆಸಿದರು.
ಇದಕ್ಕೂ ಮುನ್ನ, ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಬಲವಂತದ ಕಣ್ಮರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತನಾಡಿದ್ದ ವಿದೇಶಾಂಗ ಸಚಿವಾಲಯದ ಉಪ ಕಾರ್ಯದರ್ಶಿ ಬರ್ಖಾ ತಾಮ್ರಕರ್ (Barkha Tamrakar), “ಮಾನವ ಹಕ್ಕುಗಳನ್ನು ರಾಜಕೀಯ ಒತ್ತಡದ ಸಾಧನವಾಗಿ ಅಥವಾ ನಿರ್ದಿಷ್ಟ ದೇಶಗಳನ್ನು ಗುರಿಯಾಗಿಸಲು ಬಳಸಬಾರದು” ಎಂದು ಪ್ರತಿಪಾದಿಸಿದ್ದರು. ಮಾನವ ಹಕ್ಕುಗಳ ಉಲ್ಲಂಘನೆ ಆರೋಪಗಳನ್ನು ನಿಭಾಯಿಸಲು ಭಾರತದಲ್ಲಿರುವ ಸಾಂವಿಧಾನಿಕ ಮತ್ತು ಸಾಂಸ್ಥಿಕ ರಕ್ಷಣೆಗಳ ಬಗ್ಗೆ ಅವರು ಮಾಹಿತಿ ನೀಡಿದ್ದರು.
