ನವದೆಹಲಿ: ಐಪಿಎಲ್ 2026ರ ಪಂಜಾಬ್ ಕಿಂಗ್ಸ್ (PBKS) ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವಿನ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ‘ವೇಪಿಂಗ್’ (ಇ-ಸಿಗರೇಟ್ ಸೇದುವುದು) ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ನಡೆಯುತ್ತಿದ್ದಾಗ (16ನೇ ಓವರ್ ಸಮಯದಲ್ಲಿ), ರಿಯಾನ್ ಪರಾಗ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ಇ-ಸಿಗರೇಟ್ ಅಥವಾ ವೇಪ್ ಬಳಸುತ್ತಿರುವುದು ನೇರ ಪ್ರಸಾರದ ವೇಳೆ ಸೆರೆಯಾಗಿದೆ. ಈ ವೇಳೆ ಅವರ ಪಕ್ಕದಲ್ಲೇ ಧ್ರುವ್ ಜುರೆಲ್ ಮತ್ತು ಯಶಸ್ವಿ ಜೈಸ್ವಾಲ್ ಕೂಡ ಇದ್ದರು.
ಕ್ರೀಡಾಂಗಣದ ಆವರಣ ಮತ್ತು ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ, ಭಾರತದಲ್ಲಿ 2019ರ ಕಾಯ್ದೆಯಡಿ (PECA) ಇ-ಸಿಗರೇಟ್ ಅಥವಾ ವೇಪ್‌ಗಳ ಉತ್ಪಾದನೆ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ.
ಈ ಘಟನೆಯ ಬಗ್ಗೆ ಬಿಸಿಸಿಐ ಗಂಭೀರವಾಗಿ ಪರಿಗಣಿಸುವ ಸಾಧ್ಯತೆಯಿದೆ. ಈಗಾಗಲೇ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರಿಂದ ಪ್ರತಿಕ್ರಿಯೆ ನಿರೀಕ್ಷಿಸಲಾಗುತ್ತಿದೆ. ನಾಯಕನಾಗಿ ಇಂತಹ ವರ್ತನೆ ತೋರಿರುವುದು ತಂಡಕ್ಕೆ ಮುಜುಗರ ತಂದಿದೆ.
ಈ ಹಿಂದೆಯೂ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ಡಗೌಟ್‌ನಲ್ಲಿ ಫೋನ್ ಬಳಸಿ ನಿಯಮ ಉಲ್ಲಂಘಿಸಿದ್ದರು. ಇದೀಗ ನಾಯಕನೇ ವಿವಾದಕ್ಕೆ ಸಿಲುಕಿರುವುದು ತಂಡಕ್ಕೆ ಹಿನ್ನಡೆಯಾಗಬಹುದು ಎನ್ನಲಾಗುತ್ತಿದೆ. ಕ್ರೀಡಾಪಟುಗಳು ಯುವಕರಿಗೆ ಮಾದರಿಯಾಗಿರಬೇಕು ಎಂಬ ಆಶಯದ ನಡುವೆ, ಪರಾಗ್ ಅವರ ಈ ವರ್ತನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
