ಜಾಗತಿಕ ವಾಣಿಜ್ಯ ಮತ್ತು ರಾಜತಾಂತ್ರಿಕ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಇರಾನ್ ತನ್ನ ನಿಯಂತ್ರಣದಲ್ಲಿರುವ ಪ್ರಮುಖ ‘ಹಾರ್ಮುಜ್ ಜಲಸಂಧಿ’ಯನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಿದೆ. ಆದರೆ, ಈ ಮಾರ್ಗವು ಸಂಪೂರ್ಣವಾಗಿ ಮುಕ್ತವಾಗಿರದೆ, ಇರಾನ್ ವಿಧಿಸಿರುವ ಹಲವಾರು ಕಠಿಣ ಷರತ್ತುಗಳಿಗೆ ಒಳಪಟ್ಟಿದೆ.
ಕೇವಲ ನಾಗರಿಕ ಮತ್ತು ವಾಣಿಜ್ಯ ಉದ್ದೇಶದ ಹಡಗುಗಳಿಗೆ ಮಾತ್ರ ಇಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಅವುಗಳು ಇರಾನ್ ಸೂಚಿಸಿದ ನಿರ್ದಿಷ್ಟ ಮಾರ್ಗದಲ್ಲಿಯೇ ಚಲಿಸುವುದು ಕಡ್ಡಾಯವಾಗಿದೆ. ಇದರೊಂದಿಗೆ, ಜಲಸಂಧಿಯ ಮೂಲಕ ಯಾವುದೇ ದೇಶದ ಮಿಲಿಟರಿ ಅಥವಾ ಯುದ್ಧನೌಕೆಗಳ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಜಲಸಂಧಿಯ ಮೂಲಕ ಹಾದುಹೋಗುವ ಪ್ರತಿಯೊಂದು ಹಡಗು ಇರಾನ್‌ನ ಐಆರ್‌ಜಿಸಿ (IRGC) ನೌಕಾಪಡೆಯಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕಿದೆ. ಇಸ್ರೇಲ್ ಮತ್ತು ಲೆಬನಾನ್ ನಡುವೆ ಇತ್ತೀಚೆಗೆ ಏರ್ಪಟ್ಟಿರುವ ಕದನ ವಿರಾಮ ಒಪ್ಪಂದದ ಯಶಸ್ವಿ ಅನುಷ್ಠಾನದ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ಯಾವುದೇ ರೀತಿಯ ಸೇನಾ ದಾಳಿಗಳು ನಡೆಯಬಾರದು ಎಂಬ ಎಚ್ಚರಿಕೆಯ ಷರತ್ತಿನೊಂದಿಗೆ, ಅಮೆರಿಕ ಹಾಗೂ ಇಸ್ರೇಲ್‌ನ ಮೌನ ಸಮ್ಮತಿಯೊಂದಿಗೆ ಈ ಜಾಗತಿಕ ಒಪ್ಪಂದ ಕಾರ್ಯರೂಪಕ್ಕೆ ಬಂದಿದೆ ಎಂದು ವಿಶ್ಲೇಷಿಸಲಾಗಿದೆ.
ಇರಾನ್‌ನ ಈ ಮಹತ್ವದ ನಿರ್ಧಾರಕ್ಕೆ ಅಮೆರಿಕದ ನಾಯಕ ಡೊನಾಲ್ಡ್ ಟ್ರಂಪ್ ಹರ್ಷ ವ್ಯಕ್ತಪಡಿಸಿದ್ದಾರೆ. “ಇರಾನ್ ವ್ಯಾಪಾರಕ್ಕಾಗಿ ಜಲಸಂಧಿಯನ್ನು ತೆರೆಯಲು ಸಿದ್ಧವಾಗಿರುವುದು ಇಡೀ ವಿಶ್ವಕ್ಕೆ ಇದೊಂದು ಅತ್ಯಂತ ಅದ್ಭುತವಾದ ದಿನ” ಎಂದು ಅವರು ಬಣ್ಣಿಸಿದ್ದಾರೆ. ಹೀಗಿದ್ದರೂ, ಇರಾನ್ ಕಡೆಯಿಂದ ಹಾರ್ಮುಜ್ ಜಲಸಂಧಿ ಮುಕ್ತವಾಗಿದ್ದರೂ ಅಮೆರಿಕದ ನೌಕಾಪಡೆಯ ದಿಗ್ಬಂಧನ ಹಾಗೂ ಕಣ್ಗಾವಲು ಮಾತ್ರ ಎಂದಿನಂತೆ ಮುಂದುವರೆಯಲಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ವಿಶ್ವದ ಬಲಿಷ್ಠ ಅಮೆರಿಕನ್ ನೌಕಾಪಡೆಯು ಇಲ್ಲಿ ನಡೆಯುವ ಪ್ರತಿಯೊಂದು ವಹಿವಾಟಿನ ಮೇಲೂ ನೂರಕ್ಕೆ ನೂರರಷ್ಟು ನಿಗಾ ಇಡಲಿದೆ ಎಂದು ಎಚ್ಚರಿಸುವ ಮೂಲಕ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ಜಗತ್ತಿಗೆ ಸಾರಿಹೇಳಿದ್ದಾರೆ.
