ರಾಜಸ್ಥಾನದ ಬಿಕಾನೇರ್‌ನ ಪಿಬಿಎಂ (PBM) ಆಸ್ಪತ್ರೆಯಲ್ಲಿ ಈ ತಿಂಗಳ ಆರಂಭದಲ್ಲಿ ಸಿ-ಸೆಕ್ಷನ್ (C-section) ಹೆರಿಗೆಯಾದ ಬಳಿಕ ತೀವ್ರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ 6 ಮಹಿಳೆಯರ ಪೈಕಿ ಓರ್ವ ಬಾಣಂತಿ ಚಿಕಿತ್ಸೆ ಫಲಿಸದೆ ಮೃ*ತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ. ಸರಿಸುಮಾರು 20 ದಿನಗಳಿಂದ ವೆಂಟಿಲೇಟರ್ ಬೆಂಬಲದಲ್ಲಿದ್ದ ಪ್ರೀತಿ (20) ಎಂಬ ಮಹಿಳೆಯೇ ಮೃ*ತಪಟ್ಟ ದುರ್ದೈವಿ.
ಪಿಬಿಎಂ ಆಸ್ಪತ್ರೆಯಲ್ಲಿ ಸಿ-ಸೆಕ್ಷನ್ ಮೂಲಕ ಹೆರಿಗೆ ಮಾಡಿಸಿಕೊಂಡಿದ್ದ 20 ರಿಂದ 27 ವರ್ಷ ವಯಸ್ಸಿನ ಒಟ್ಟು 6 ಮಹಿಳೆಯರು ವಿಪರೀತ ರಕ್ತಸ್ರಾವ, ಸೋಂಕು, ರಕ್ತದಲ್ಲಿನ ಪ್ಲೇಟ್‌ಲೆಟ್ ಕುಸಿತ ಹಾಗೂ ಬಹು ಅಂಗಾಂಗ ವೈಫಲ್ಯದಂತಹ ಗಂಭೀರ ಸಮಸ್ಯೆಗಳಿಂದ ಬಳಲುತ್ತಿದ್ದರು.
ಮೃ*ತಪಟ್ಟ ಮಹಿಳೆಯ ಕುರಿತು ಮಾಹಿತಿ ನೀಡಿರುವ ಪಿಬಿಎಂ ಆಸ್ಪತ್ರೆಯ ಅಧೀಕ್ಷಕ ಡಾ. ಭಿಕಮ್ ಚಂದ್ ಘಿಯಾ, ಪ್ರೀತಿ ಅವರ ಮೂತ್ರಪಿಂಡಗಳು ಕಾರ್ಯನಿರ್ವಹಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದವು. ತೀವ್ರ ನಿಗಾ ಘಟಕದಲ್ಲಿಟ್ಟು ನಿರಂತರ ಚಿಕಿತ್ಸೆ ನೀಡಿದರೂ, ಬಹು ಅಂಗಾಂಗ ವೈಫಲ್ಯದಿಂದಾಗಿ ಅವರು ಗುರುವಾರ ಮಧ್ಯಾಹ್ನ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಒಮ್ಮೆಗೆ ಇಷ್ಟು ದೊಡ್ಡ ಸಂಖ್ಯೆಯ ಬಾಣಂತಿಯರು ತೀವ್ರವಾಗಿ ಅಸ್ವಸ್ಥರಾಗಲು ನಿಖರವಾದ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಡೆಯುತ್ತಿರುವ ತನಿಖೆ ಹಾಗೂ ಪ್ರಯೋಗಾಲಯದ ವರದಿಗಳೊಂದಿಗೆ ಮರಣೋತ್ತರ ಪರೀಕ್ಷೆಯ ಫಲಿತಾಂಶವನ್ನು ಸಹ ಪರಿಶೀಲಿಸಿ, ಮಹಿಳೆಯರ ಆರೋಗ್ಯ ಹದಗೆಡಲು ನಿಖರ ಕಾರಣವನ್ನು ಪತ್ತೆ ಮಾಡಲಾಗುವುದು ಎಂದು ಸರ್ದಾರ್ ಪಟೇಲ್ ವೈದ್ಯಕೀಯ ಕಾಲೇಜಿನ (SPMC) ಪ್ರಾಂಶುಪಾಲರಾದ ಸುರೇಂದ್ರ ಕುಮಾರ್ ವರ್ಮಾ ತಿಳಿಸಿದ್ದಾರೆ.
ಒಂದೇ ಆಸ್ಪತ್ರೆಯಲ್ಲಿ 6 ಬಾಣಂತಿಯರ ಸ್ಥಿತಿ ಗಂಭೀರವಾಗಿರುವುದು ಇಡೀ ರಾಜ್ಯಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿದೆ. ಘಟನೆಯ ಗಂಭೀರತೆಯನ್ನು ಅರಿತ ಅಧಿಕಾರಿಗಳು ಆಸ್ಪತ್ರೆ, ವೈದ್ಯಕೀಯ ಕಾಲೇಜು ಹಾಗೂ ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರತ್ಯೇಕ ತನಿಖಾ ಸಮಿತಿಗಳನ್ನು ರಚಿಸಿದ್ದಾರೆ. ಎಲ್ಲಾ ಪ್ರಕರಣಗಳ ಹಿಂದಿನ ಸಾಮಾನ್ಯ ಅಂಶವನ್ನು ಪತ್ತೆಹಚ್ಚಲು, ಚಿಕಿತ್ಸೆಯಲ್ಲಿ ಬಳಸಲಾದ ಔಷಧಗಳು ಹಾಗೂ ಇತರ ವೈದ್ಯಕೀಯ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಸ್ತುತ ಹಲವು ಲ್ಯಾಬ್ ಮತ್ತು ಕಲ್ಚರ್ ಪರೀಕ್ಷಾ ವರದಿಗಳು ಇನ್ನು ಬರಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇವಲ ಒಂದು ತಿಂಗಳ ಹಿಂದೆಯಷ್ಟೇ ಕೋಟಾದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸಿ-ಸೆಕ್ಷನ್ ಹೆರಿಗೆಯ ನಂತರ 5 ಮಹಿಳೆಯರು ಮೃ*ತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
