ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ಪುನಾರಚನೆಯ ಕೂಗು ತೀವ್ರಗೊಂಡಿದೆ. ಸಚಿವ ಸಂಪುಟಕ್ಕೆ ಸರ್ಜರಿ ಮಾಡಲೇಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹೇರುವ ಉದ್ದೇಶದಿಂದ 25ಕ್ಕೂ ಹೆಚ್ಚು ಶಾಸಕರ ದಂಡು ಇಂದು(ಭಾನುವಾರ) ದೆಹಲಿಗೆ ಪ್ರಯಾಣ ಬೆಳೆಸಲಿದೆ. ಮೇ 4ರಂದು 5 ರಾಜ್ಯಗಳ ಚುನಾವಣೆ ಹಾಗೂ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಆ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಸ್ತಾಂತರ ಹಾಗೂ ಸಂಪುಟ ಪುನಾರಚನೆಯಂತಹ ಮಹತ್ವದ ಬದಲಾವಣೆಗಳು ನಡೆಯುವ ದಟ್ಟ ವದಂತಿಗಳ ನಡುವೆ ಶಾಸಕರ ಈ ದೆಹಲಿ ಪ್ರವಾಸ ಭಾರಿ ಕುತೂಹಲ ಕೆರಳಿಸಿದೆ.
ಪ್ರಸ್ತುತ ಸಂಪುಟದಲ್ಲಿರುವ ಕನಿಷ್ಠ 15ರಿಂದ 20 ಮಂದಿ ಸಚಿವರನ್ನು ಕೈಬಿಟ್ಟು, ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಬೇಕು ಎಂಬುದು ಈ ಶಾಸಕರ ಪ್ರಮುಖ ಬೇಡಿಕೆಯಾಗಿದೆ. ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದವರೇ ಈಗಲೂ ಅಧಿಕಾರ ಅನುಭವಿಸುತ್ತಿದ್ದಾರೆ, ಆದರೆ ಅವರಿಗಿಂತ ಹಿರಿಯ ಹಾಗೂ ಅನುಭವಿ ಶಾಸಕರಿಗೆ ಇನ್ನೂ ಮಂತ್ರಿಗಿರಿ ಸಿಕ್ಕಿಲ್ಲ ಎಂಬ ಅಸಮಾಧಾನ ಭುಗಿಲೆದ್ದಿದೆ. ಅಲ್ಲದೆ, ಪ್ರಸ್ತುತ ಸಂಪುಟದಲ್ಲಿ ಜಾತಿ, ಜಿಲ್ಲೆ ಹಾಗೂ ಪ್ರಾದೇಶಿಕವಾರು ಸಮತೋಲನವಿಲ್ಲ. ಹೀಗಾಗಿ ತಕ್ಷಣವೇ ಸಂಪುಟ ಪುನಾರಚನೆ ಮಾಡಬೇಕೆಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಈ ನಿಯೋಗ ಕಟ್ಟುನಿಟ್ಟಿನ ಒತ್ತಾಯ ಮಾಡಲಿದೆ.
ನಿಯೋಗದಲ್ಲಿ ಯಾವೆಲ್ಲಾ ಶಾಸಕರು?
ಹೈಕಮಾಂಡ್ ಭೇಟಿಗೆ ತೆರಳುತ್ತಿರುವ ಶಾಸಕರ ಈ ನಿಯೋಗದಲ್ಲಿ ಪ್ರಮುಖ ಹಿರಿಯ ನಾಯಕರಿದ್ದಾರೆ. ಟಿ.ಬಿ. ಜಯಚಂದ್ರ, ಅಶೋಕ ಪಟ್ಟಣ, ಸುಬ್ಬಾರೆಡ್ಡಿ, ಹಂಪನಗೌಡ ಬಾದರ್ಲಿ, ಜಿ.ಟಿ. ಪಾಟೀಲ್, ಡಿ.ಜಿ. ಶಾಂತನಗೌಡ, ಬಸವರಾಜ ನೀಲಪ್ಪನವರ್, ಎ.ಆರ್. ಕೃಷ್ಣಮೂರ್ತಿ, ಅಬ್ಬಯ್ಯ ಪ್ರಸಾದ್, ಸಿ.ಎಸ್. ಪಾಟೀಲ್, ಯಶವಂತರಾಯ ಗೌಡ ಪಾಟೀಲ್, ಕೆ. ಷಡಕ್ಷರಿ, ರಿಜ್ವಾನ್ ಅರ್ಷದ್, ಪ್ರಿಯಕೃಷ್ಣ, ರಮೇಶ್ ಬಂಡಿಸಿದ್ದೇಗೌಡ ಹಾಗೂ ಆನೇಕಲ್ ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ಭಾನುವಾರ ಸಂಜೆ ದಿಲ್ಲಿ ವಿಮಾನ ಏರಲಿದ್ದಾರೆ.
ಶಾಸಕರ ಈ ನಡೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಭಾರೀ ಬದಲಾವಣೆಗಳಾಗುವ ಮುನ್ಸೂಚನೆ ನೀಡಿದೆ.
