ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾಳಗದ ವೇಳೆ ತಮಿಳುನಾಡಿನ ಮಹಿಳಾ ಪ್ರವಾಸಿಗರೊಬ್ಬರು ಮೃತಪಟ್ಟ ಘಟನೆಯ ಬೆನ್ನಲ್ಲೇ ಎಚ್ಚೆತ್ತಿರುವ ಅರಣ್ಯ ಇಲಾಖೆಯು ರಾಜ್ಯದ ಆನೆ ಶಿಬಿರಗಳಿಗೆ ಅತ್ಯಂತ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸಿದೆ. ಆನೆಗಳ ನಿರ್ವಹಣೆ ಮತ್ತು ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ‘ಕರ್ನಾಟಕ ಆನೆ ಶಿಬಿರ ಸುರಕ್ಷತಾ ನಿಯಮಾವಳಿ’ಯನ್ನು ಜಾರಿಗೆ ತರಲಾಗಿದೆ.
ಪ್ರವಾಸಿಗರಿಗೆ ಆನೆಗಳನ್ನು ಮುಟ್ಟುವಂತಿಲ್ಲ
ಹೊಸ ಮಾರ್ಗಸೂಚಿಯ ಅನ್ವಯ ಇನ್ನು ಮುಂದೆ ದುಬಾರೆ, ಸಕ್ರೆಬೈಲು ಸೇರಿದಂತೆ ರಾಜ್ಯದ ಯಾವುದೇ ಆನೆ ಶಿಬಿರಗಳಲ್ಲಿ ಪ್ರವಾಸಿಗರು ಆನೆಗಳನ್ನು ಹತ್ತಿರದಿಂದ ಮುಟ್ಟುವುದು, ಅವುಗಳಿಗೆ ಆಹಾರ ನೀಡುವುದು ಅಥವಾ ಸ್ನಾನ ಮಾಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಳೆದ ಮೇ 19ರಂದು ದುಬಾರೆ ಆನೆ ಶಿಬಿರದಲ್ಲಿ ಸಂಭವಿಸಿದ ದುರಂತದ ನಂತರ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಅವರು ಈ ಹೊಸ ಮಾರ್ಗಸೂಚಿಗೆ ಅಧಿಕೃತವಾಗಿ ಸಹಿ ಹಾಕಿದ್ದಾರೆ.
30 ಅಡಿ ಸುರಕ್ಷಿತ ಅಂತರ ಕಡ್ಡಾಯ
ಪ್ರವಾಸಿಗರು ಆನೆಗಳನ್ನು ವೀಕ್ಷಿಸಲು ಇನ್ನು ಮುಂದೆ ಕನಿಷ್ಠ 10 ಮೀಟರ್ (30 ಅಡಿ) ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಇಲಾಖೆ ನಿರ್ಮಿಸುವ ಡಬಲ್ ಬ್ಯಾರಿಕೇಡ್‌ಗಳ ಹಿಂದೆಯೇ ನಿಂತು ಆನೆಗಳನ್ನು ವೀಕ್ಷಿಸಬೇಕು. ಸಾರ್ವಜನಿಕ ವೀಕ್ಷಣೆಗಾಗಿ ಯಾವುದೇ ಒಂದು ಶಿಬಿರದ ವೀಕ್ಷಣಾ ಅವಧಿಯಲ್ಲಿ ಹತ್ತಕ್ಕಿಂತ ಹೆಚ್ಚು ಆನೆಗಳನ್ನು ಪ್ರದರ್ಶಿಸುವಂತಿಲ್ಲ. ಇದಲ್ಲದೆ, ಪ್ರತಿಯೊಂದು ಚಟುವಟಿಕೆ ಹಾಗೂ ಪ್ರವಾಸಿಗರ ಓಡಾಟವನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ನಿಯಮಾವಳಿಗಳಲ್ಲಿ ಕಟ್ಟುನಿಟ್ಟಾಗಿ ಹೇಳಲಾಗಿದೆ.
ಪ್ರವಾಸಿಗರ ಸಂಖ್ಯೆಗೆ ಕಡಿವಾಣ ಮತ್ತು ಸಾಪ್ತಾಹಿಕ ರಜೆ
ಶಿಬಿರದ ಸಾಮರ್ಥ್ಯ ಮತ್ತು ಆನೆಗಳ ಸಂಖ್ಯೆಗೆ ಅನುಗುಣವಾಗಿ ಪ್ರವಾಸಿಗರನ್ನು ಪ್ರತ್ಯೇಕ ಬ್ಯಾಚ್‌ಗಳಾಗಿ ವಿಂಗಡಿಸಲಾಗುತ್ತದೆ. ಗ್ರೀನ್ ಝೋನ್‌ನಲ್ಲಿ ಒಂದೇ ಸಮಯದಲ್ಲಿ ಕೇವಲ 50 ರಿಂದ 75 ಪ್ರವಾಸಿಗರಿಗೆ ಮಾತ್ರ ಪ್ರವೇಶಾವಕಾಶ ಇರಲಿದ್ದು, ಅವರ ವೀಕ್ಷಣಾ ಅವಧಿಯನ್ನು 20 ರಿಂದ 30 ನಿಮಿಷಗಳಿಗೆ ಸೀಮಿತಗೊಳಿಸಲಾಗಿದೆ. ವೀಕ್ಷಣೆಗೂ ಮುನ್ನ 10 ನಿಮಿಷಗಳ ಕಾಲ ಪ್ರವಾಸಿಗರಿಗೆ ಭದ್ರತಾ ಬ್ರೀಫಿಂಗ್ ನೀಡಲಾಗುತ್ತದೆ. ಪ್ರವಾಸಿಗರ ದಟ್ಟಣೆ ನಿಯಂತ್ರಿಸಲು ಮತ್ತು ಆನೆಗಳ ಮಾನಸಿಕ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ವಾರದಲ್ಲಿ ಒಂದು ದಿನ, ಅಂದರೆ ಮಂಗಳವಾರದಂದು ಶಿಬಿರಗಳಿಗೆ ಕಡ್ಡಾಯ ರಜೆ ಘೋಷಿಸಲಾಗಿದೆ.
ನಿಯಮ ಜಾರಿಗೆ 15 ದಿನಗಳ ಗಡುವು
ಮದಾವಸ್ಥೆಯಲ್ಲಿರುವ, ಗಾಯಗೊಂಡ, ಅಸ್ವಸ್ಥ ಅಥವಾ ಇತ್ತೀಚೆಗೆ ಆಕ್ರಮಣಕಾರಿ ಪ್ರವೃತ್ತಿ ತೋರಿದ ಆನೆಗಳನ್ನು ಸಾರ್ವಜನಿಕ ವೀಕ್ಷಣೆಯಿಂದ ಸಂಪೂರ್ಣವಾಗಿ ದೂರ ಇಡಲಾಗುವುದು. ಜೊತೆಗೆ ಆರು ತಿಂಗಳೊಳಗಿನ ಮರಿ ಇರುವ ತಾಯಿ ಆನೆಗಳಿಗೂ ವಿಶ್ರಾಂತಿ ನೀಡಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ. ರಾಜ್ಯದ ಎಲ್ಲಾ ಶಿಬಿರಗಳಿಗೆ ಈ ನಿಯಮ ಅಳವಡಿಸಿಕೊಳ್ಳಲು 15 ದಿನಗಳ ಗಡುವು ನೀಡಲಾಗಿದೆ. ಅಧಿಕಾರಿಗಳ ಪರಿಶೀಲನೆ ಹಾಗೂ ಪ್ರಮಾಣೀಕರಣ ಸಿಗುವವರೆಗೂ ಶಿಬಿರಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ದುಬಾರೆ, ಹಾರಂಗಿ, ಮತ್ತಿಗೋಡು ಹಾಗೂ ಸಕ್ರೆಬೈಲು ಸೇರಿದಂತೆ ಎಲ್ಲಾ ಕೇಂದ್ರಗಳಲ್ಲಿ ಜೂನ್ ಕೊನೆಯ ವಾರದೊಳಗೆ ಈ ನಿಯಮಗಳು ಸಂಪೂರ್ಣವಾಗಿ ಜಾರಿಗೆ ಬರಲಿವೆ. ನಿಯಮ ಉಲ್ಲಂಘಿಸುವ ಶಿಬಿರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
