S Shorts

ಬದುಕಿರುವಾಗಲೇ ಸತ್ತಿದ್ದಾರೆ ಎಂದು ಪೋಸ್ಟ್ ವೈರಲ್: ಕಿಡಿಗೇಡಿಗಳ ವಿರುದ್ಧ ಕಾನೂನು ಸಮರಕ್ಕಿಳಿದ ನಟ ದೊಡ್ಡಣ್ಣ!

ಬದುಕಿರುವಾಗಲೇ ಸತ್ತಿದ್ದಾರೆ ಎಂದು ಪೋಸ್ಟ್ ವೈರಲ್: ಕಿಡಿಗೇಡಿಗಳ ವಿರುದ್ಧ ಕಾನೂನು ಸಮರಕ್ಕಿಳಿದ ನಟ ದೊಡ್ಡಣ್ಣ!
Author: Meghana Gowda
Posted By: Meghana Gowda
Updated: Jun 17, 2026 | 11:06 AM

ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ಹಾಗೂ ಜನಪ್ರಿಯ ನಟ ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿಯೊಂದು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಈ ಸಂಬಂಧ ಸ್ವತಃ ನಟ ದೊಡ್ಡಣ್ಣ ಅವರೇ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ತಮಗೆ ತೀವ್ರ ಮಾನಸಿಕ ಹಾನಿ ಉಂಟುಮಾಡಿರುವ ಈ ವದಂತಿಯ ವಿರುದ್ಧ ಅವರು ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ.

ಕಿಡಿಗೇಡಿಗಳು ಕೃತಕ ಬುದ್ಧಿಮತ್ತೆ ಅಂದರೆ ಎಐ (Artificial Intelligence) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ನಟ ದೊಡ್ಡಣ್ಣ ಅವರ ಚಿತ್ರ ಹಾಗೂ ಮಾಹಿತಿಯನ್ನು ಎಡಿಟ್ ಮಾಡಿದ್ದಾರೆ. ತಾವು ಬದುಕಿರುವಾಗಲೇ ಸತ್ತಿದ್ದಾರೆ ಎಂಬ ಅರ್ಥ ಬರುವಂತಹ ಸುಳ್ಳು ಪೋಸ್ಟ್‌ಗಳನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವೈರಲ್ ಮಾಡಿದ್ದಾರೆ. ಇದರಿಂದಾಗಿ ದೊಡ್ಡಣ್ಣ ಅವರ ಅಭಿಮಾನಿಗಳು ಹಾಗೂ ಚಿತ್ರರಂಗದ ಆಪ್ತರಲ್ಲಿ ಭಾರಿ ಗೊಂದಲ ಸೃಷ್ಟಿಯಾಗಿತ್ತು.

ಈ ಸುಳ್ಳು ಸುದ್ದಿ ಮತ್ತು ವದಂತಿಗಳಿಂದ ತಮಗೆ ವೈಯಕ್ತಿಕವಾಗಿ ಹಾಗೂ ಕೌಟುಂಬಿಕವಾಗಿ ಅತೀವ ಮಾನಸಿಕ ನೋವು ಉಂಟಾಗಿದೆ ಎಂದು ನಟ ದೊಡ್ಡಣ್ಣ ಅವರು ದೂರಿನಲ್ಲಿ ತಿಳಿಸಿದ್ದಾರೆ. ಸಮಾಜದಲ್ಲಿ ಇಲ್ಲದ ವದಂತಿ ಹಬ್ಬಿಸಿ ವಿಕೃತ ಆನಂದ ಪಡುವ ಇಂತಹ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅವರು ಕಳೆದ ಜೂನ್ 15 ರಂದು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಕೆ ಮಾಡಿದ್ದಾರೆ.

ಹಿರಿಯ ನಟನ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಉತ್ತರ ವಿಭಾಗದ ಸೈಬರ್ ಠಾಣೆ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ (IT Act) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸುಳ್ಳು ಸುದ್ದಿಯನ್ನು ಮೊದಲು ಸೃಷ್ಟಿಸಿದ ಹಾಗೂ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಅಪರಿಚಿತ ಆರೋಪಿಗಳ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.