ಬೆಂಗಳೂರು: ರಾಜ್ಯದಲ್ಲಿ ಬಡವರಿಗೆ ವಿತರಿಸಲಾಗುವ ಪಡಿತರ ಅಕ್ಕಿಯ ಅಕ್ರಮ ದಾಸ್ತಾನು ಮತ್ತು ಕಳ್ಳಸಾಗಣೆ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬೃಹತ್ ಕಾರ್ಯಾಚರಣೆ ನಡೆಸಿದೆ. ಕಳೆದ ಮೂರು ದಿನಗಳಲ್ಲಿ ರಾಜ್ಯದ ವಿವಿಧೆಡೆ ಸರಣಿ ದಾಳಿ ನಡೆಸಿರುವ ಅಧಿಕಾರಿಗಳು, 564 ಟನ್ಗೂ ಅಧಿಕ ಅಕ್ರಮ ಪಡಿತರ ಅಕ್ಕಿ ಹಾಗೂ 24 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಒಟ್ಟು ₹4.75 ಕೋಟಿ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದ್ದು, 6 ಪ್ರಕರಣಗಳನ್ನು ದಾಖಲಿಸಿ 9 ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಒಂದು ಗೋದಾಮನ್ನು ಸೀಜ್ ಮಾಡಲಾಗಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಒಟ್ಟು 5,64,992 ಕೆ.ಜಿ. ಅಕ್ರಮ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ₹1,34,43,033 ಆಗಿದ್ದು, ವಶಪಡಿಸಿಕೊಂಡ 24 ವಾಹನಗಳ ಮೌಲ್ಯ ₹3,41,50,000 ಎಂದು ಅಂದಾಜಿಸಲಾಗಿದೆ. ಅಗತ್ಯ ವಸ್ತುಗಳ ಕಾಯ್ದೆಯಡಿ ಒಟ್ಟು ₹4,75,93,033 ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ.
ಬೆಳಗಾವಿಯಲ್ಲಿ ಅತಿದೊಡ್ಡ ದಾಳಿ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಲೋಕೂರು ಗ್ರಾಮದಲ್ಲಿರುವ ಶ್ರೀ ಬನಶಂಕರಿ ಅಗ್ರೋ ಪ್ರೊಸೆಸಿಂಗ್ ಪ್ರೈ.ಲಿ. ಅಕ್ಕಿ ಗಿರಣಿ ಮೇಲೆ ಆಹಾರ, ಕೃಷಿ ಮಾರಾಟ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 4,22,800 ಕೆ.ಜಿ. ಪಡಿತರ ಅಕ್ಕಿ ಹಾಗೂ 19 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಗೋದಾಮನ್ನು ಸೀಜ್ ಮಾಡಲಾಗಿದೆ.
ಇದೇ ಜಿಲ್ಲೆಯ ಮತ್ತೊಂದು ಕಾರ್ಯಾಚರಣೆಯಲ್ಲಿ, ಬಣ್ಣದ ಪ್ಯಾಕೆಟ್ಗಳಲ್ಲಿ ಪ್ಯಾಕ್ ಮಾಡಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಲಾರಿಗಳ ಮೂಲಕ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 71,800 ಕೆ.ಜಿ. ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಈ ಸಂಬಂಧ ನಿಪ್ಪಾಣಿ ಗ್ರಾಮೀಣ ಹಾಗೂ ಮಾಳಮಾರುತಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಚಾಲಕರಾದ ರತನ್ ಬಬನ್ ಸದಾನಂದೆ, ಮಹಮ್ಮದ್ ರಫೀಕ್ ಅತ್ತಾರ್ ಹಾಗೂ ವಿಜಯನಾರಾಯಣ ಭೋಸ್ಲೆ ಅವರ ವಿರುದ್ಧ ದೂರು ದಾಖಲಿಸಲಾಗಿದೆ.
ವಿಜಯಪುರ, ಬೆಂಗಳೂರು ಗ್ರಾಮಾಂತರದಲ್ಲೂ ಅಕ್ಕಿ ಜಪ್ತಿ
ವಿಜಯಪುರ ನಗರದ ಜಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಲಾರಿಯಿಂದ 35,392 ಕೆ.ಜಿ. ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆ ಚೆಕ್ಪೋಸ್ಟ್ ಬಳಿ ತಮಿಳುನಾಡಿಗೆ ಸಾಗಿಸಲಾಗುತ್ತಿದ್ದ 35,000 ಕೆ.ಜಿ. ಪಡಿತರ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದ ಶ್ರೀ ಅನ್ನಪೂರ್ಣೇಶ್ವರಿ ಎಂಟರ್ಪ್ರೈಸಸ್ ಮಾಲೀಕರು, ಮಧ್ಯಪ್ರದೇಶದ ಇಂದೋರ್ನ ಸೇಲರ್ ಎಕ್ಸ್ಪೋರ್ಟ್ಸ್ ಲಿಮಿಟೆಡ್ ಮಾಲೀಕರು ಹಾಗೂ ಲಾರಿ ಚಾಲಕರು ಸೇರಿದಂತೆ 4 ಜನರ ವಿರುದ್ಧ ದೂರು ದಾಖಲಿಸಲಾಗಿದೆ.
ಕರ್ತವ್ಯ ಲೋಪ: ಇಬ್ಬರು ಅಧಿಕಾರಿಗಳ ಅಮಾನತು
ಹುಕ್ಕೇರಿಯ ರವಿ ಟ್ರೇಡರ್ಸ್ನಲ್ಲಿ ನಡೆಸಿದ ತಪಾಸಣೆ ವೇಳೆ ಮೇಲಧಿಕಾರಿಗಳ ಸೂಚನೆಗಳನ್ನು ಪಾಲಿಸದೆ, ಸ್ಥಳದಲ್ಲಿದ್ದ ಅಕ್ಕಿ ದಾಸ್ತಾನು ಹಾಗೂ ಲಾರಿಯನ್ನು ಪೊಲೀಸ್ ಪ್ರಕರಣ ದಾಖಲಿಸದೆ ಬಿಡುಗಡೆಗೊಳಿಸಿದ ಆರೋಪದ ಮೇಲೆ ಇಬ್ಬರು ಆಹಾರ ಇಲಾಖೆಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಹುಕ್ಕೇರಿ ತಾಲೂಕಿನ ಆಹಾರ ಶಿರಸ್ತೇದಾರ್ ಎಲ್.ಬಿ. ಡಾಂಘೆ ಹಾಗೂ ಆಹಾರ ನಿರೀಕ್ಷಕ ಪ್ರವೀಣ್ ಸಾಗರ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಅಧಿಕಾರ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.
ಕಳ್ಳಸಾಗಣೆದಾರರಿಗೆ ಸಚಿವರ ಎಚ್ಚರಿಕೆ
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ವಿವಿಧ ಇಲಾಖೆಗಳ ಅಧಿಕಾರಿಗಳ ಕಾರ್ಯವನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಶ್ಲಾಘಿಸಿದ್ದಾರೆ. ಬಡವರಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಿ ಲಾಭ ಗಳಿಸುವುದು ಗಂಭೀರ ಅಪರಾಧವಾಗಿದ್ದು, ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಪಡಿತರ ಅಕ್ಕಿ ಕಳ್ಳಸಾಗಣೆಯಲ್ಲಿ ತೊಡಗಿರುವವರು, ಅವರಿಗೆ ಸಹಕರಿಸುವವರು ಹಾಗೂ ಕರ್ತವ್ಯ ಲೋಪ ಎಸಗುವ ಇಲಾಖೆಯ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
