ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಕೊಕ್ರಝಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಶಿಹೋರಿ ಟೋಲ್ ಪ್ಲಾಜಾದಲ್ಲಿ ಡಿವೈಡರ್‌ಗೆ ಎಲ್‌ಪಿಜಿ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ 4 ಮಂದಿ ಸಜೀವ ದಹನವಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾನ್ಪುರದಿಂದ ವಾರಣಾಸಿಗೆ ಭರ್ತಿ ಎಲ್‌ಪಿಜಿ ತುಂಬಿಕೊಂಡು ತೆರಳುತ್ತಿದ್ದ ಈ ಟ್ಯಾಂಕರ್ ಅಗ್ನಿ ಅವಘಡಕ್ಕೀಡಾದ ದೆಹಲುವೆಬ್ಬಿಸುವ ಸಿಸಿಟಿವಿ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಅಪಘಾತಕ್ಕೆ ಕಾರಣವಾದ ಆ ಒಂದು ಕ್ಷಣ
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳ ಆಧಾರದ ಮೇಲೆ ಅಪಘಾತದ ಚಿತ್ರಣ ಸ್ಪಷ್ಟವಾಗಿದೆ. ಎಲ್‌ಪಿಜಿ ಟ್ಯಾಂಕರ್ ಟೋಲ್ ಪ್ಲಾಜಾದತ್ತ ವೇಗವಾಗಿ ಸಾಗುತ್ತಿದ್ದ ವೇಳೆ ಅದರ ಪಕ್ಕದಲ್ಲೇ ಮತ್ತೊಂದು ವಾಹನ ಬಂದಿದೆ. ಒಂದು ಹಂತದಲ್ಲಿ ಎರಡೂ ವಾಹನಗಳು ಒಂದೇ ಪಥದಲ್ಲಿ ಸಾಗಲು ಮುಂದಾಗಿದ್ದವು. ಈ ವೇಳೆ ಪಕ್ಕದ ಟ್ಯಾಂಕರ್ ಅನ್ನು ಗಮನಿಸಿದ ಚಾಲಕ, ತನ್ನ ವಾಹನವನ್ನು ಏಕಾಏಕಿ ತಿರುಗಿಸಲು ಯತ್ನಿಸಿದ್ದಾನೆ. ಪರಿಣಾಮವಾಗಿ ನಿಯಂತ್ರಣ ತಪ್ಪಿದ ಟ್ಯಾಂಕರ್ ನೇರವಾಗಿ ಟೋಲ್ ಪ್ಲಾಜಾದ ಡಿವೈಡರ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯಾದ ಕೆಲವೇ ಕ್ಷಣಗಳಲ್ಲಿ ಟ್ಯಾಂಕರ್‌ಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ದಟ್ಟ ಹೊಗೆ ಆವರಿಸಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ನೋಡ ನೋಡುತ್ತಲೇ ಭಾರೀ ಸ್ಫೋಟ ಸಂಭವಿಸಿದ್ದು, ಬೆಂಕಿ ಕ್ಷಣಾರ್ಧದಲ್ಲೇ ಇಡೀ ವಾಹನವನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದರಿಂದ ಒಳಗಿದ್ದವರಿಗೆ ಹಾಗೂ ಸಮೀಪದಲ್ಲಿದ್ದವರಿಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವೇ ಸಿಗಲಿಲ್ಲ.
ನಾಲ್ವರ ದಾರುಣ ಸಾವು
ಈ ಘೋರ ದುರಂತದಲ್ಲಿ ಟ್ಯಾಂಕರ್ ಚಾಲಕ ಹಾಗೂ ಮೂವರು ಟೋಲ್ ಪ್ಲಾಜಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ಚಾಲಕನನ್ನು ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಧರ್ಮೇಂದ್ರ ದ್ವಿವೇದಿ ಎಂದು ಗುರುತಿಸಲಾಗಿದ್ದು, ಇವರು ವಾಹನದ ಕ್ಯಾಬಿನ್ ಒಳಗೆ ಸಿಲುಕಿಕೊಂಡು ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸ್ಥಳದಲ್ಲೇ ಸಾ*ವನ್ನಪ್ಪಿದ್ದಾರೆ.
ಇದಲ್ಲದೆ, ಐದು ಮಂದಿ ಟೋಲ್ ಪ್ಲಾಜಾ ನೌಕರರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಪ್ರಯಾಗ್‌ರಾಜ್‌ನ ಸ್ವರೂಪ್ ರಾಣಿ ನೆಹರು (ಎಸ್‌ಆರ್‌ಎನ್) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗಾಯಾಳುಗಳಲ್ಲಿ ಒಬ್ಬರಾದ ಅಲೋಕ್ ಸಿಂಗ್ ಮರುದಿನ ನಿಧನರಾದರು. ತರುವಾಯ ರಾಯ್‌ಬರೇಲಿಯ ನಿವಾಸಿ ಹಿರಾಮಣಿ ಸಿಂಗ್ ಮತ್ತು ಲಲಿತಪುರ ನಿವಾಸಿ ಕೃಷ್ಣಪಾಲ್ ಮೌರ್ಯ ಎಂಬ ಇಬ್ಬರು ನೌಕರರು ಕೂಡ ಚಿಕಿತ್ಸೆ ವೇಳೆ ಮೃ*ತಪಟ್ಟಿದ್ದು, ಒಟ್ಟಾರೆ ಸಾ*ವಿನ ಸಂಖ್ಯೆ ನಾಲ್ಕಕ್ಕೇರಿದೆ. ಇತರ ಇಬ್ಬರು ನೌಕರರು ಆಸ್ಪತ್ರೆಯಲ್ಲಿ ಸಾ*ವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮತ್ತು ಪೊಲೀಸ್ ತನಿಖೆ
ಅವಘಡದ ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಭಾರಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ಸಿಬ್ಬಂದಿಯ ಸತತ ಹರಸಾಹಸದ ಬಳಿಕ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಯಿತಾದರೂ, ಅಷ್ಟರಲ್ಲಾಗಲೇ ಟ್ಯಾಂಕರ್ ಮತ್ತು ಸುತ್ತಮುತ್ತಲಿನ ಟೋಲ್ ಕಟ್ಟಡಗಳಿಗೆ ಅಪಾರ ಹಾನಿಯಾಗಿತ್ತು.
ಕೊಖ್ರಾಝಾರ್ ಠಾಣೆ ಅಧಿಕಾರಿ ಚಂದ್ರ ಭೂಷಣ್ ಮೌರ್ಯ ಅವರು ಸಾವುನೋವುಗಳ ವಿವರವನ್ನು ದೃಢಪಡಿಸಿದ್ದು, ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾಂತ್ರಿಕ ದೋಷ, ಚಾಲಕನ ನಿರ್ಲಕ್ಷ್ಯ ಅಥವಾ ನಿಯಂತ್ರಣ ತಪ್ಪಿರುವುದು ಈ ದುರ್ಘಟನೆಗೆ ನಿಖರ ಕಾರಣವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಿಸಿಟಿವಿ ದೃಶ್ಯಗಳು ಸೇರಿದಂತೆ ಇತರ ವೈಜ್ಞಾನಿಕ ಸಾಕ್ಷ್ಯಗಳನ್ನು ಆಧರಿಸಿ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.
ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳ ಜಾರಿ ಅತ್ಯಗತ್ಯ
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎಲ್‌ಪಿಜಿ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ರಾಸಾಯನಿಕಗಳಂತಹ ಅಪಾಯಕಾರಿ ವಸ್ತುಗಳನ್ನು ಸಾಗಿಸುವ ವಾಹನಗಳ ಸುರಕ್ಷತೆಯ ಕುರಿತು ಈ ದುರಂತವು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಂಬರುವ ದಿನಗಳಲ್ಲಿ ಇಂತಹ ಭೀಕರ ಅವಘಡಗಳನ್ನು ತಡೆಯಲು ಸಂಬಂಧಪಟ್ಟ ಇಲಾಖೆಗಳು ಹಾಗೂ ಸಾರಿಗೆ ಸಂಸ್ಥೆಗಳು ಚಾಲಕರಿಗೆ ಸೂಕ್ತ ತರಬೇತಿ ಹಾಗೂ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳನ್ನು ಜಾರಿಗೆ ತರಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ವ್ಯಾಪಕವಾಗಿ ಕೇಳಿಬರುತ್ತಿದೆ.
