S Shorts

Shocking News | ಸಾರ್ವಜನಿಕ ರಸ್ತೆ ಇಲ್ಲದೆ 7 ದಶಕಗಳ ನರಕಯಾತನೆ, ಕುತ್ತಿಗೆಯಮಟ್ಟದ ನೀರಿನಲ್ಲೇ ಶವಯಾತ್ರೆ!

Shocking News | ಸಾರ್ವಜನಿಕ ರಸ್ತೆ ಇಲ್ಲದೆ 7 ದಶಕಗಳ ನರಕಯಾತನೆ, ಕುತ್ತಿಗೆಯಮಟ್ಟದ ನೀರಿನಲ್ಲೇ ಶವಯಾತ್ರೆ!
Author: Sagaradventure
Posted By: Sagaradventure
Updated: Jul 4, 2026 | 12:40 PM

ಉತ್ತರಕನ್ನಡ ಜಿಲ್ಲೆಯ ​ಹೊನ್ನಾವರ ತಾಲೂಕಿನ ‘ಚಿಕ್ಕ ಗ್ರಾಮ ಪಂಚಾಯಿತಿ’ ಎಂಬ ಹಿರಿಮೆ ಹೊಂದಿರುವ ಹೊಸಾಕುಳಿ ಗ್ರಾಮದ ದೊಡ್ಡಹಿತ್ತಲ್ ಮಜರೆಯ 50ಕ್ಕೂ ಅಧಿಕ ಮನೆಗಳ ನಿವಾಸಿಗಳು ಇಂದಿಗೂ ಮನೆ ಸೇರಲು ಜೀವ ಕೈಯಲ್ಲಿಡಿದು ಸಾಗಬೇಕಾದ ಶೋಚನೀಯ ಸ್ಥಿತಿಯಲ್ಲಿದ್ದಾರೆ.

ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಈ ಭಾಗದ ಜನರಿಗೆ ಒಂದು ಸಾರ್ವಜನಿಕ ರಸ್ತೆಯಿಲ್ಲ. ಮಳೆಗಾಲ ಬಂದರೆ ಸಾಕು, ಸೊಂಟದವರೆಗೆ ನಿಲ್ಲುವ ನೀರಿನಲ್ಲಿ, ಖಾಸಗಿ ಭೂಮಾಲೀಕರ ಮರ್ಜಿಗೆ ಒಳಗಾಗಿ ಅವರ ಹಿತ್ತಲುಗಳ ಮೂಲಕವೇ ಮನೆ ಸೇರಬೇಕಾದ ಅನಿವಾರ್ಯತೆ ಇದೆ. ಅಭಿವೃದ್ಧಿಯ ಮಂತ್ರ ಜಪಿಸುವ ಈ ಕಾಲದಲ್ಲೂ ಇಂತಹ ಪರಿಸ್ಥಿತಿ ಇರುವುದು ಆಡಳಿತ ವ್ಯವಸ್ಥೆಯ ಮತ್ತು ಜನಪ್ರತಿನಿಧಿಗಳ ಸಂಪೂರ್ಣ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಭಾಸ್ಕೇರಿ ಹೊಳೆ ಪ್ರವಾಹ: ಕುತ್ತಿಗೆ ಮಟ್ಟದ ನೀರಿನಲ್ಲಿ ಶವಯಾತ್ರೆ!

​ನಿರಂತರ ಮಳೆಯಿಂದಾಗಿ ಈ ಮಜರೆಯ ಮಧ್ಯೆ ಹಾದುಹೋಗುವ ಭಾಸ್ಕೇರಿ ಹೊಳೆ ಉಕ್ಕಿ ಹರಿದು ಇಡೀ ತೋಟ, ಕಾಲುದಾರಿಗಳು ಜಲಾವೃತವಾಗುತ್ತವೆ. ಇಂತಹ ಪ್ರಾಣಾಪಾಯದ ಸ್ಥಿತಿಯಲ್ಲಿ, ಕಳೆದ ಎರಡು ದಿನಗಳ ಹಿಂದೆ ಈ ಕೇರಿಯಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಶವಪೆಟ್ಟಿಗೆಯನ್ನು ಕುತ್ತಿಗೆಯಮಟ್ಟದ ನೀರಿನಲ್ಲಿ ಹೊತ್ತು ಸಾಗಿಸಿದ ದೃಶ್ಯ ಎಂಥವರ ಮೈಯನ್ನೂ ಝುಮ್ ಎನಿಸುತ್ತದೆ.

ಉದ್ಯೋಗ, ಶಾಲೆ ಹಾಗೂ ಆಸ್ಪತ್ರೆಗೆ ತೆರಳುವ 150ಕ್ಕೂ ಹೆಚ್ಚು ಜನ ನಿತ್ಯ ಇದೇ ಪ್ರವಾಹದಲ್ಲಿ ಜೀವದ ಹಂಗು ತೊರೆದು ಓಡಾಡುತ್ತಿದ್ದಾರೆ. ಹೊಳೆ ತುಂಬಿ ಮನೆಯ ಜಗುಲಿಗೆ ನೀರು ಬಂದರೆ, ದೋಣಿಯ ಮೂಲಕ ತೆರಳಿ ಕಾಳಜಿ ಕೇಂದ್ರ ಸೇರುವುದೇ ಇವರಿಗೆ ಅಂತಿಮ ಆಸರೆಯಾಗಿದೆ.

ಮೂಲಭೂತ ಹಕ್ಕುಗಳ ಉಲ್ಲಂಘನೆ: ರಸ್ತೆ, ಸಂಕಕ್ಕಾಗಿ ಆಗ್ರಹ

​”ನೂರಾರು ವರ್ಷಗಳಿಂದ ನಾವಿಲ್ಲಿ ವಾಸವಿದ್ದೇವೆ. ನಮಗೊಂದು ಶಾಶ್ವತ ಕಾಲುದಾರಿ ಹಾಗೂ ಹೊಳೆಗೆ ಒಂದು ಕಾಲುಸಂಕ ನಿರ್ಮಿಸಿಕೊಡಿ” ಎಂದು ದಶಕಗಳಿಂದ ಶಾಸಕರಿಗೆ ಹಾಗೂ ಸರ್ಕಾರಕ್ಕೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಯಾರದ್ದೋ ಖಾಸಗಿ ಜಾಗದ ತಕರಾರಿನ ನೆಪವೊಡ್ಡಿ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ.

​ಸುದೀರ್ಘ 20 ವರ್ಷಗಳ ಕಾಲ ಒಂದೇ ಜಾಗದಲ್ಲಿ ಸಾರ್ವಜನಿಕರು ಓಡಾಡಿದರೆ, ಅದು ಖಾಸಗಿ ಭೂಮಿಯಾಗಿದ್ದರೂ ಓಡಾಡುವವರ ಹಕ್ಕಾಗುತ್ತದೆ ಎಂದು ಕಾನೂನು ಹೇಳುತ್ತದೆ. ಜೊತೆಗೆ, ಫುಟ್‌ಪಾತ್‌ ಅನ್ನು ಸರ್ವೋಚ್ಚ ನ್ಯಾಯಾಲಯವು ‘ಮೂಲಭೂತ ಹಕ್ಕು’ ಎಂದು ಸಾರಿದೆ. ಪ್ರಾಣಾಪಾಯ ಎದುರಿಸುತ್ತಾ, ನಿತ್ಯ ಒದ್ದೆಯಾಗಿ ಶಾಲೆ-ಉದ್ಯೋಗಕ್ಕೆ ತೆರಳುವ ಈ ಕೇರಿಯ ಜನರ ಪರದಾಟ ತಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ರಸ್ತೆ ಮತ್ತು ಕಾಲುಸಂಕ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಉಗ್ರವಾಗಿ ಆಗ್ರಹಿಸಿದ್ದಾರೆ.