ವಿಶಾಖಪಟ್ಟಣಂನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ತಾಂತ್ರಿಕ ದೋಷ ಕಾಣಿಸಿಕೊಂಡ ಘಟನೆ ನಡೆದಿದೆ. 148 ಪ್ರಯಾಣಿಕರಿದ್ದ ಈ ವಿಮಾನವನ್ನು ಪೈಲಟ್‌ಗಳ ಸಮಯಪ್ರಜ್ಞೆಯಿಂದಾಗಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದ್ದು, ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ವಿಶಾಖಪಟ್ಟಣಂನಿಂದ ಹೊರಟಿದ್ದ ಏರ್ ಇಂಡಿಯಾ IX2065 ವಿಮಾನವು ಕೆಂಪೇಗೌಡ ನಿಲ್ದಾಣದಲ್ಲಿ ಲ್ಯಾಂಡಿಂಗ್‌ಗೆ ಸಜ್ಜಾಗುತ್ತಿದ್ದಾಗ ಈ ಹಕ್ಕಿ ಡಿಕ್ಕಿ ಹೊಡೆದಿದೆ. ಘಟನೆಯ ವೇಳೆ ವಿಮಾನದಲ್ಲಿದ್ದ ಎಲ್ಲಾ 148 ಮಂದಿ ಪ್ರಯಾಣಿಕರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ಖಚಿತಪಡಿಸಿವೆ.
ಹಕ್ಕಿ ಡಿಕ್ಕಿ ಹೊಡೆದ ತಕ್ಷಣವೇ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತಾದರೂ, ಯಾವುದೇ ಆತಂಕವಿಲ್ಲದೆ ವಿಮಾನವನ್ನು ರನ್‌ವೇ ಮೇಲೆ ಇಳಿಸಲಾಗಿದೆ. ಸದ್ಯ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಈ ವಿಮಾನವನ್ನು ವಿಮಾನ ನಿಲ್ದಾಣದ ‘V49’ ಸ್ಟ್ಯಾಂಡ್‌ನಲ್ಲಿ ನಿಲುಗಡೆ ಮಾಡಲಾಗಿದ್ದು, ತಾಂತ್ರಿಕ ತಜ್ಞರ ತಂಡದಿಂದ ಪರಿಶೀಲನೆ ಕಾರ್ಯ ನಡೆಯುತ್ತಿದೆ.
