ಶಿವಮೊಗ್ಗ: ಜಿಲ್ಲೆಯ ಮಲೆನಾಡು ಭಾಗಗಳಾದ ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಮತ್ತೆ ಮಂಗನ ಕಾಯಿಲೆ (KFD – Kyasanur Forest Disease) ಪ್ರಕರಣಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ, ಅರಣ್ಯದಂಚಿನ ಹಾಗೂ ಗ್ರಾಮೀಣ ಭಾಗದ ಜನರು ತೀವ್ರ ಎಚ್ಚರಿಕೆ ಮತ್ತು ಜಾಗೃತಿ ವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (DHO) ಡಾ. ನಟರಾಜ್ ಕೆ.ಎಸ್. ಅವರು ತುರ್ತು ಸೂಚನೆ ಹೊರಡಿಸಿದ್ದಾರೆ.
ಯಾವೆಲ್ಲಾ ಗ್ರಾಮಗಳಲ್ಲಿ ಪ್ರಕರಣ ಪತ್ತೆ?
ಸದ್ಯ ತೀರ್ಥಹಳ್ಳಿಯ ಅರಳಸುರುಳಿ, ಮೇಗರವಳ್ಳಿ, ಹೊಸನಗರ ತಾಲೂಕಿನ ಸೊನಲೆ, ರಿಪ್ಪನ್‌ಪೇಟೆ ಹಾಗೂ ಸಾಗರ ತಾಲೂಕಿನ ತಾಳಗುಪ್ಪ ವ್ಯಾಪ್ತಿಯ ಹಿರೇಮನೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಈ ಭಾಗದ ಜನರಿಗೆ ಜ್ವರ, ತಲೆನೋವು ಅಥವಾ ಮೈಕೈ ನೋವಿನಂತಹ ಲಕ್ಷಣಗಳು ಕಂಡುಬಂದರೆ, ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸದೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ತಿಳಿಸಿದೆ.
ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು:
- ಡಿಪಾ ತೈಲ ಕಡ್ಡಾಯ: ಕಾಡಿಗೆ ಅಥವಾ ಅಡಿಕೆ ತೋಟಕ್ಕೆ ಕೆಲಸಕ್ಕೆ ಹೋಗುವವರು ಕಡ್ಡಾಯವಾಗಿ ತಮ್ಮ ಮೈಗೆ ಉಣ್ಣೆ ನಿರೋಧಕ ‘ಡಿಪಾ ತೈಲ’ವನ್ನು (DEPA oil) ಹಚ್ಚಿಕೊಳ್ಳಬೇಕು.
- ಒಣ ಎಲೆಗಳ ಸಂಗ್ರಹಕ್ಕೆ ಬ್ರೇಕ್: ಸದ್ಯದ ಸೂಕ್ಷ್ಮ ಪರಿಸ್ಥಿತಿಯಲ್ಲಿ ಕಾಡಿನ ಒಣ ಎಲೆಗಳನ್ನು (ದರಗು) ತಂದು ಗುಡ್ಡೆ ಹಾಕುವ ಹಾಗೂ ಸಂಗ್ರಹಿಸುವ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು.
- ಅಧಿಕಾರಿಗಳಿಗೆ ಮಾಹಿತಿ ನೀಡಿ: ಕಾಡಿನಲ್ಲಿ ಅಥವಾ ತೋಟಗಳ ಬಳಿ ಮಂಗಗಳು ಅಸಹಜವಾಗಿ ಮೃತಪಟ್ಟಿರುವುದು ಕಂಡುಬಂದರೆ, ಬರಿಗೈಯಲ್ಲಿ ಮುಟ್ಟಲು ಹೋಗಬಾರದು. ತಕ್ಷಣವೇ ಅರಣ್ಯ ಇಲಾಖೆ ಅಥವಾ ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.
ಖಾಸಗಿ ಆಸ್ಪತ್ರೆಗಳಿಗೆ ಡಿಹೆಚ್‌ಒ ಕಟ್ಟುನಿಟ್ಟಿನ ಎಚ್ಚರಿಕೆ
ಮಂಗನ ಕಾಯಿಲೆ ನಿಯಂತ್ರಣದ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳಿಗೂ ಡಿಹೆಚ್‌ಒ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ. ಜ್ವರದ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಕೇವಲ ನೋವು ನಿವಾರಕ ಮಾತ್ರೆಗಳನ್ನು (Painkillers) ನೀಡಿ ಮನೆಗೆ ಕಳುಹಿಸಬಾರದು. ಕೂಡಲೇ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಿ, ರೋಗಿಯನ್ನು ಕಡ್ಡಾಯವಾಗಿ ರಕ್ತ ಪರೀಕ್ಷೆಗೆ ಶಿಫಾರಸು ಮಾಡಬೇಕು ಎಂದು ಆದೇಶಿಸಿದ್ದಾರೆ. ಅಲ್ಲದೆ, ಮಂಗನ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
