ನವದೆಹಲಿ: ಜಗತ್ತಿನಾದ್ಯಂತ ಯಕೃತ್ತಿನ (ಲಿವರ್) ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ‘ದಿ ಲ್ಯಾನ್ಸೆಟ್ ಗ್ಯಾಸ್ಟ್ರೋಎಂಟರಾಲಜಿ ಅಂಡ್ ಹೆಪಟಾಲಜಿ’ ಜರ್ನಲ್ ಪ್ರಕಟಿಸಿದ ಇತ್ತೀಚಿನ ಅಧ್ಯಯನ ವರದಿಯೊಂದು ಆಘಾತಕಾರಿ ಮಾಹಿತಿ ಹೊರಹಾಕಿದೆ. 2023 ರಲ್ಲಿ ಜಾಗತಿಕವಾಗಿ ಸುಮಾರು 1.3 ಬಿಲಿಯನ್ ಜನರು ಮೆಟಾಬಾಲಿಕ್ ಡಿಸ್‌ಫಂಕ್ಷನ್-ಅಸೋಸಿಯೇಟೆಡ್ ಸ್ಟೀಟೋಟಿಕ್ ಲಿವರ್ ಡಿಸೀಸ್ (MASLD) ನಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. 1990 ರಿಂದ ಈವರೆಗೆ ಈ ಪ್ರಕರಣಗಳಲ್ಲಿ ಬರೋಬ್ಬರಿ 143 ಪ್ರತಿಶತದಷ್ಟು (ಶೇ 143) ಏರಿಕೆಯಾಗಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ.
ಗ್ಲೋಬಲ್ ಬರ್ಡನ್ ಆಫ್ ಡಿಸೀಸಸ್, ಇಂಜುರೀಸ್ ಅಂಡ್ ರಿಸ್ಕ್ ಫ್ಯಾಕ್ಟರ್ಸ್ ಸ್ಟಡಿ (GBD) 2023 ರ ದತ್ತಾಂಶವನ್ನು ಆಧರಿಸಿ ಈ ವಿಶ್ಲೇಷಣೆ ಮಾಡಲಾಗಿದೆ. ನಿರಂತರವಾಗಿ ಬೆಳೆಯುತ್ತಿರುವ ಜನಸಂಖ್ಯೆ, ಬದಲಾಗುತ್ತಿರುವ ಜೀವನಶೈಲಿ, ಹೆಚ್ಚುತ್ತಿರುವ ಬೊಜ್ಜು ಮತ್ತು ಅಧಿಕ ರಕ್ತದ ಸಕ್ಕರೆ (ಹೈ ಬ್ಲಡ್ ಶುಗರ್) ಮಟ್ಟದಿಂದಾಗಿ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ. 2050 ರ ವೇಳೆಗೆ ಜಾಗತಿಕವಾಗಿ MASLD ಪ್ರಕರಣಗಳ ಸಂಖ್ಯೆ ಸುಮಾರು 1.8 ಬಿಲಿಯನ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿ ಗಂಭೀರ ಮುನ್ಸೂಚನೆ ನೀಡಿದೆ.
GBD 2023 MASLD ಸಂಶೋಧಕರ ತಂಡವು ಜಾಗತಿಕ ಮಟ್ಟದಲ್ಲಿ ಈ ಕಾಯಿಲೆಯ ಹರಡುವಿಕೆಯ ಬಗ್ಗೆ ತೀವ್ರ ಅಧ್ಯಯನ ನಡೆಸಿದ್ದು, ಭೌಗೋಳಿಕವಾಗಿಯೂ ಪ್ರಕರಣಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳಿರುವುದನ್ನು ಕಂಡುಕೊಂಡಿದೆ. ಪ್ರಪಂಚದ ಇತರ ಪ್ರದೇಶಗಳಿಗೆ ಹೋಲಿಸಿದರೆ ಉತ್ತರ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಂತಹ (Middle East) ಪ್ರದೇಶಗಳಲ್ಲಿ MASLD ಕಾಯಿಲೆಯ ಪ್ರಮಾಣವು ಅಸಮಾನವಾಗಿ ಹೆಚ್ಚಿನ ಮಟ್ಟದಲ್ಲಿದೆ.
ಒಟ್ಟಾರೆಯಾಗಿ ಮಾನವನ ಆಧುನಿಕ ಹಾಗೂ ತಪ್ಪು ಜೀವನಶೈಲಿಯೇ ಈ ಗಂಭೀರ ಆರೋಗ್ಯ ಸಮಸ್ಯೆಗೆ ಪ್ರಮುಖ ಕಾರಣವಾಗಿದ್ದು, ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಜ್ಞರು ಎಚ್ಚರಿಸಿದ್ದಾರೆ.
