S Shorts

Leopard: ಕೇಜ್‌ನಲ್ಲಿದ್ದ ಚಿರತೆಯಿಂದಲೇ ಅಟ್ಯಾಕ್! ಬನ್ನೇರುಘಟ್ಟ ಉದ್ಯಾನವನದ ಸಿಬ್ಬಂದಿಗೆ ಗಂಭೀರ ಗಾಯ

Leopard: ಕೇಜ್‌ನಲ್ಲಿದ್ದ ಚಿರತೆಯಿಂದಲೇ ಅಟ್ಯಾಕ್! ಬನ್ನೇರುಘಟ್ಟ ಉದ್ಯಾನವನದ ಸಿಬ್ಬಂದಿಗೆ ಗಂಭೀರ ಗಾಯ
Author: Meghana Gowda
Posted By: Meghana Gowda
Updated: Feb 14, 2026 | 9:54 AM

ಬೆಂಗಳೂರು: ಸಿಲಿಕಾನ್ ಸಿಟಿಯ ಹೆಮ್ಮೆಯ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪುನರ್ವಸತಿ ಕೇಂದ್ರದಲ್ಲಿ (Rescue Center) ಚಿರತೆಗಳನ್ನು ನೋಡಿಕೊಳ್ಳುತ್ತಿದ್ದ ಪ್ರಾಣಿ ಪಾಲಕರ ಮೇಲೆ ಚಿರತೆ(Leopard) ಯೊಂದು ದಾಳಿ ನಡೆಸಿದ್ದು, 48 ವರ್ಷದ ಶಾಂತಪ್ಪ (Shantappa)  ಎಂಬುವವರು ಗಾಯಗೊಂಡಿದ್ದಾರೆ.

ನಡೆದಿದ್ದೇನು?

ಉದ್ಯಾನವನದ ಪುನರ್ವಸತಿ ಕೇಂದ್ರದಲ್ಲಿ ಚಿರತೆ ಇರುವ ಕೇಜ್‌ಗಳನ್ನು (ಗೂಡು) ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿತ್ತು. ನಿಯಮದಂತೆ, ಒಂದು ಗೂಡನ್ನು ಸ್ವಚ್ಛ ಮಾಡುವಾಗ ಚಿರತೆಯನ್ನು ಪಕ್ಕದ ಗೂಡಿಗೆ ಸ್ಥಳಾಂತರಿಸಲಾಗುತ್ತದೆ. ಶಾಂತಪ್ಪ ಅವರು ಗೂಡು ಸ್ವಚ್ಛಗೊಳಿಸುತ್ತಿದ್ದಾಗ, ಪಕ್ಕದ ಗೂಡಿನಲ್ಲಿದ್ದ ಚಿರತೆ ಕಬ್ಬಿಣದ ಮೆಷ್‌ಗಳ (Iron Mesh) ನಡುವೆ ತನ್ನ ಕಾಲುಗಳನ್ನು ತೂರಿಸಿ ದಿಢೀರ್ ದಾಳಿ ಮಾಡಿದೆ.

ಚಿರತೆ ತನ್ನ ಹರಿತವಾದ ಉಗುರುಗಳಿಂದ ಪರಚಿದ ಪರಿಣಾಮ ಶಾಂತಪ್ಪ ಅವರ ಕೆನ್ನೆ ಮತ್ತು ಕುತ್ತಿಗೆಯ ಭಾಗದಲ್ಲಿ ತೀವ್ರ ಗಾಯಗಳಾಗಿವೆ. ಕೂಡಲೇ ಎಚ್ಚೆತ್ತ ಇತರ ಸಿಬ್ಬಂದಿ ಅವರನ್ನು ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಶಾಂತಪ್ಪ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಉದ್ಯಾನವನದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಾಣಿಗಳನ್ನು ನಿರ್ವಹಿಸುವಾಗ ಸುರಕ್ಷತಾ ಕ್ರಮಗಳಲ್ಲಿ ಲೋಪವಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.