S Shorts

Lokayukta ಬಲೆಗೆ ಬಿದ್ದ ಬ್ರಹ್ಮಾಂಡ ಭ್ರಷ್ಟ: 30 ಲಕ್ಷ ರೂ. ಲಂಚ ಪಡೆಯುತ್ತಿದ್ದ ಕೆಎಎಸ್ ಅಧಿಕಾರಿ, ಚಾಲಕ ಅರೆಸ್ಟ್!

Lokayukta ಬಲೆಗೆ ಬಿದ್ದ ಬ್ರಹ್ಮಾಂಡ ಭ್ರಷ್ಟ: 30 ಲಕ್ಷ ರೂ. ಲಂಚ ಪಡೆಯುತ್ತಿದ್ದ ಕೆಎಎಸ್ ಅಧಿಕಾರಿ, ಚಾಲಕ ಅರೆಸ್ಟ್!
Author: Sagaradventure
Posted By: Sagaradventure
Updated: Apr 29, 2026 | 4:43 PM

ಬೆಂಗಳೂರು: ಬಾಕಿ ಉಳಿದಿದ್ದ ಆರ್.ಆರ್.ಟಿ (RRT) ಪ್ರಕರಣವೊಂದರಲ್ಲಿ ಅನುಕೂಲಕರ ಆದೇಶ ನೀಡಲು ಬರೋಬ್ಬರಿ 30 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟು, ಹಣ ಪಡೆಯುತ್ತಿದ್ದ ಕೆಎಎಸ್ (KAS) ಅಧಿಕಾರಿ ಹಾಗೂ ಆತನ ಚಾಲಕ ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಬಂಧಿತ ಆರೋಪಿಗಳನ್ನು ಕೆಐಎಡಿಬಿ (KIADB) ವಿಶೇಷ ಭೂಸ್ವಾಧೀನಾಧಿಕಾರಿ-1 ಹಾಗೂ ವಿಶೇಷ ಸಹಾಯಕ ಆಯುಕ್ತ (ಉತ್ತರ) ಆಗಿರುವ ಕೆಎಎಸ್ ಅಧಿಕಾರಿ ನಾಗಪ್ರಶಾಂತ್ ಮತ್ತು ಆತನ ಇಲಾಖೆಗೆ ಸೇರಿದ ಚಾಲಕ ಕುಮಾರ್ ಎಂದು ಗುರುತಿಸಲಾಗಿದೆ. ಯಲಹಂಕದ ಅಟ್ಟೂರು ನಿವಾಸಿ ರವಿಕುಮಾರ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ತಂಡ ಈ ಕಾರ್ಯಾಚರಣೆ ನಡೆಸಿ, ಬಲೆ ಬೀಸಿತ್ತು.

ಅಧಿಕಾರಿಗಳ ಮಾಹಿತಿಯ ಪ್ರಕಾರ, ಪ್ರಕರಣದ ಪರವಾಗಿ ಆದೇಶ ನೀಡಲು ಆರೋಪಿಗಳು 30 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಪೈಕಿ 15 ಲಕ್ಷ ರೂ.ಗಳನ್ನು ಅಧಿಕಾರಿಯ ಸೂಚನೆಯ ಮೇರೆಗೆ ಚಾಲಕ ಕುಮಾರ್ ಮೊದಲೇ ಪಡೆದುಕೊಂಡಿದ್ದ ಎನ್ನಲಾಗಿದೆ. ಬುಧವಾರ ಉಳಿಕೆ 15 ಲಕ್ಷ ರೂ.ಗಳನ್ನು ಚಾಲಕ ಸ್ವೀಕರಿಸುತ್ತಿದ್ದ ವೇಳೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಪ್ರಸ್ತುತ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.