S Shorts

Udupi | ಉಡುಪಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್‌ಗೆ ಪ್ರವಾಸಿ ಬಸ್‌ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳ ಸಾವು, ಹಲವರಿಗೆ ಗಾಯ

Udupi | ಉಡುಪಿಯಲ್ಲಿ ಭೀಕರ ಅಪಘಾತ: ಟ್ಯಾಂಕರ್‌ಗೆ ಪ್ರವಾಸಿ ಬಸ್‌ ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳ ಸಾವು, ಹಲವರಿಗೆ ಗಾಯ
Author: Meghana Gowda
Posted By: Meghana Gowda
Updated: Apr 29, 2026 | 4:29 PM

ಉಡುಪಿ: ಕರಾವಳಿ ಜಿಲ್ಲೆಯ ಪ್ರವಾಸಕ್ಕೆಂದು ಬಂದಿದ್ದ ಶಿವಮೊಗ್ಗದ ವಿದ್ಯಾರ್ಥಿಗಳ ಬಸ್, ಬೈಂದೂರು ತಾಲೂಕಿನ ತ್ರಾಸಿ ಬೀಚ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತಕ್ಕೆ ಈಡಾಗಿದೆ. ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಪ್ರವಾಸೀ ಬಸ್ ಅತಿವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟ ರಂಭಾಪುರಿ ಕಾಲೇಜಿನ ಸುಮಾರು 47 ಬಿ.ಕಾಂ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಕರಾವಳಿಗೆ ಬಂದಿದ್ದರು. ಉತ್ತರ ಕನ್ನಡದ ಮುರುಡೇಶ್ವರದ ದರ್ಶನ ಮುಗಿಸಿ ಉಡುಪಿಯತ್ತ ಬರುತ್ತಿದ್ದಾಗ, ತ್ರಾಸಿ ಬೀಚ್ ಬಳಿಯ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಬಸ್ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಚಾಲಕನ ಅತಿವೇಗದ ಚಾಲನೆಯೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದ್ದು, ಡಿಕ್ಕಿಯ ರಭಸಕ್ಕೆ ಬಸ್ ಮತ್ತು ಟ್ಯಾಂಕರ್ ಎರಡೂ ನಜ್ಜುಗುಜ್ಜಾಗಿವೆ.

ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ದುರ್ಮರಣ ಹೊಂದಿದ್ದು, ಬಸ್‌ನಲ್ಲಿದ್ದ ಇತರ ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ಮತ್ತು ಪೊಲೀಸರು ಕೂಡಲೇ ರಕ್ಷಣಾ ಕಾರ್ಯ ನಡೆಸಿ, ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಐದಾರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ರಕ್ತಸಿಕ್ತವಾಗಿದ್ದ ಹೆದ್ದಾರಿಯಲ್ಲಿ ವಿದ್ಯಾರ್ಥಿಗಳ ಚೀರಾಟ ಮನಕಲಕುವಂತಿತ್ತು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.