S Shorts

Love Mocktail 3: ಮಾತು ಮೌನವಾಗಿಸುವ ‘ಒಬ್ಬಂಟಿಯಾದೆ ನಾ’ ಹಾಡು ಬಿಡುಗಡೆ!

Love Mocktail 3: ಮಾತು ಮೌನವಾಗಿಸುವ ‘ಒಬ್ಬಂಟಿಯಾದೆ ನಾ’ ಹಾಡು ಬಿಡುಗಡೆ!
Author: Kalanvitha Jain
Posted By: Kalanvitha Jain
Updated: Feb 19, 2026 | 1:28 PM

ಬೆಂಗಳೂರು: ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ ‘ಲವ್ ಮಾಕ್ಟೇಲ್ 3’ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈಗಾಗಲೇ ಸರಣಿಯ ಮೊದಲ ಎರಡು ಭಾಗಗಳಿಂದ ಕನ್ನಡಿಗರ ಮನಗೆದ್ದಿರುವ ಈ ಚಿತ್ರತಂಡ, ಪ್ರೇಮಿಗಳ ದಿನದ ಅಂಗವಾಗಿ ‘ಒಬ್ಬಂಟಿಯಾದೆ ನಾ’ ಎಂಬ ವಿರಹದ ಹಾಡನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದೆ.

“ಮಾತು ಮೌನವಾಗಿದೆ, ಶೋಕ ಭಾವ ಮೂಡಿದೆ…” ಎಂದು ಆರಂಭವಾಗುವ ಈ ಹೃದಯಸ್ಪರ್ಶಿ ಹಾಡಿಗೆ ರಾಘವೇಂದ್ರ ಕಾಮತ್ ಸಾಹಿತ್ಯ ಬರೆದಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್ ಅವರೇ ಈ ಹಾಡಿಗೆ ಧ್ವನಿಯಾಗಿದ್ದು, ಸಂಗೀತ ಸಂಯೋಜನೆಯನ್ನೂ ಅವರೇ ಮಾಡಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಪ್ರೇಮಿಗಳ ದಿನದಂದು ಬಿಡುಗಡೆಯಾಗಿದ್ದರೂ, ಇದೊಂದು ಎವರ್‌ಗ್ರೀನ್ ವಿರಹ ಗೀತೆಯಾಗಿ ಜನರ ಮನಗೆಲ್ಲುವ ಲಕ್ಷಣ ತೋರಿಸುತ್ತಿದೆ.

 

ಏಪ್ರಿಲ್ 10ಕ್ಕೆ ಅದ್ಧೂರಿ ಬಿಡುಗಡೆ

ಹಾಡುಗಳ ಮೂಲಕ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿರುವ ‘ಲವ್ ಮಾಕ್ಟೇಲ್ 3’ ಸಿನಿಮಾ ಇದೇ ಏಪ್ರಿಲ್ 10ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಮೊದಲ ಎರಡು ಭಾಗಗಳು ಪ್ರೇಮಕಥೆಯ ಮೇಲೆ ಕೇಂದ್ರೀಕೃತವಾಗಿದ್ದರೆ, ಈ ಮೂರನೇ ಭಾಗದಲ್ಲಿ ತಂದೆ-ಮಗಳ ಬಾಂಧವ್ಯದ ಎಮೋಷನಲ್ ಕಥೆಯೂ ಇರಲಿದೆ ಎಂಬುದು ಚಿತ್ರತಂಡದ ಮಾಹಿತಿ.

ಇನ್ನು ಈ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟನೆ ಮಾಡಿದ್ದಾರೆ. ಹಾಗೂ ಮಿಲನಾ ನಾಗಾರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಅವರೇ ಚಿತ್ರವನ್ನು ನಿರ್ಮಿಸಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

ಲವ್ ಮಾಕ್ಟೇಲ್ ಮೊದಲ ಭಾಗಕ್ಕೆ ಇದ್ದಂತಹ ಹವಾ ಈ ಮೂರನೇ ಭಾಗಕ್ಕೂ ಮುಂದುವರಿಯುತ್ತಿದ್ದು, ಈ ಬೇಸಿಗೆಯಲ್ಲಿ ಕನ್ನಡಿಗರಿಗೆ ಮತ್ತೊಂದು ಸುಂದರ ಅನುಭವ ನೀಡಲು ಆದಿ ಮತ್ತು ಟೀಮ್ ಸಜ್ಜಾಗಿದೆ.