ಆಸ್ಟ್ರೇಲಿಯಾ: ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಆಟಗಾರ ಜೋಶ್ ಇಂಗ್ಲಿಸ್ (Josh Inglis) ತಮ್ಮ ದೀರ್ಘಕಾಲದ ಗೆಳತಿ ಮೇಗನ್ ಕಿನ್ಕಾರ್ಟ್ ಅವರನ್ನು ವರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಐಪಿಎಲ್ 2026ರ ಕಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಪರ ಅಬ್ಬರಿಸಲು ಸಜ್ಜಾಗುತ್ತಿರುವ ಆಸ್ಟ್ರೇಲಿಯಾದ ವಿಕೆಟ್ ಕೀಪರ್-ಬ್ಯಾಟರ್ ಜೋಶ್ ಇಂಗ್ಲಿಸ್, ಭಾರತಕ್ಕೆ ಆಗಮಿಸುವ ಮುನ್ನವೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘಕಾಲದ ಗೆಳತಿ ಮೇಗನ್ ಕಿಂಕಾರ್ಟ್ ಅವರನ್ನು ಇಂಗ್ಲಿಸ್ ವಿವಾಹವಾಗಿದ್ದಾರೆ.
View this post on Instagram
ಪಶ್ಚಿಮ ಆಸ್ಟ್ರೇಲಿಯಾದ ಮಾರ್ಗರೆಟ್ ನದಿಯ ತೀರದಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ಖಾಸಗಿ ಸಮಾರಂಭದ ಮೂಲಕ ಈ ಜೋಡಿ ಒಂದಾಗಿದೆ. ಏಪ್ರಿಲ್ 18ರಂದು ಈ ವಿವಾಹ ಮಹೋತ್ಸವ ನಡೆದಿದೆ. ಇಂಗ್ಲಿಸ್ ಮತ್ತು ಮೇಗನ್ ದಂಪತಿಗೆ ಈಗಾಗಲೇ ಆಸ್ಕರ್ ಎಂಬ ಎರಡು ವರ್ಷದ ಪುತ್ರನಿದ್ದಾನೆ. 2024ರ ಏಪ್ರಿಲ್‌ನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.
ಮದುವೆಯ ಕಾರಣದಿಂದಾಗಿ ಜೋಶ್ ಇಂಗ್ಲಿಸ್ ಐಪಿಎಲ್‌ನ ಮೊದಲಾರ್ಧದ ಪಂದ್ಯಗಳಿಂದ ದೂರ ಉಳಿದಿದ್ದರು. ಲಕ್ನೋ ಸೂಪರ್ ಜೈಂಟ್ಸ್ ತಂಡವು ಇವರನ್ನು ಮೆಗಾ ಹರಾಜಿನಲ್ಲಿ 8.60 ಕೋಟಿ ರೂ. ಭಾರಿ ಮೊತ್ತಕ್ಕೆ ಖರೀದಿಸಿತ್ತು.
ಪ್ರಸ್ತುತ ಲಕ್ನೋ ತಂಡವು ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದು, ಸಂಕಷ್ಟದಲ್ಲಿದೆ. ಇಂಗ್ಲಿಸ್ ಆಗಮನವು ತಂಡದ ಬ್ಯಾಟಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ನೀಡುವ ನಿರೀಕ್ಷೆಯಿದೆ. ಇಂಗ್ಲಿಸ್ ಅವರು ಮೇ ಮೊದಲ ವಾರದಲ್ಲಿ ಭಾರತಕ್ಕೆ ಬರಲಿದ್ದು, ಮೇ 4ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆಯಿದೆ.
ತಮ್ಮ ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಈ ದಂಪತಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಕ್ರಿಕೆಟ್ ಅಭಿಮಾನಿಗಳು ಮತ್ತು ಸಹ ಆಟಗಾರರು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.
