S Shorts

ಮಂಗಳೂರಿನ ಕುಖ್ಯಾತ ರೌಡಿ ಕೇರಳದಲ್ಲಿ ಭೀಕರವಾಗಿ ಹತ್ಯೆ 

ಮಂಗಳೂರಿನ ಕುಖ್ಯಾತ ರೌಡಿ ಕೇರಳದಲ್ಲಿ ಭೀಕರವಾಗಿ ಹತ್ಯೆ 
Author: Rashmi Yadav
Posted By: Rashmi Yadav
Updated: Nov 1, 2025 | 12:45 PM

ಕಾಸರಗೋಡು (ಕೇರಳ): ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಭಯ ಹುಟ್ಟಿಸಿದ್ದ, 25ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳ ಪ್ರಮುಖ ಆರೋಪಿ ಹಾಗೂ ಕುಖ್ಯಾತ ರೌಡಿ ಟೊಪ್ಪಿ ನೌಫಾಲ್ (38) ರನ್ನು ಕೇರಳದ ಗಡಿಭಾಗದಲ್ಲಿ ಭೀಕರವಾಗಿ ಕೊಚ್ಚಿ ಹತ್ಯೆ ಮಾಡಲಾಗಿದೆ.

ಈ ಹತ್ಯೆ ಪ್ರತಿಸ್ಪರ್ಧಿ ಗ್ಯಾಂಗ್‌ನಿಂದಲೇ ನಡೆದಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಳ ರೈಲ್ವೆ ಗೇಟ್ ಸಮೀಪ ಈ ಘಟನೆ ನಡೆದಿದೆ.

ಮಾತುಕತೆಯ ನೆಪದಲ್ಲಿ ಕರೆಸಿ ಹತ್ಯೆ?: ಮಂಗಳೂರಿನ ಬಜಾಲ್‌ನ ಫೈಸಲ್ ನಗರ ನಿವಾಸಿಯಾದ ನೌಫಾಲ್, ಮಂಗಳೂರಿನಲ್ಲಿ ಡ್ರಗ್ಸ್ ವಿರುದ್ಧ ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡ ನಂತರ ಕಾಸರಗೋಡು ಪ್ರದೇಶದಲ್ಲಿ ಸಕ್ರಿಯನಾಗಿದ್ದ.

ಪ್ರಾಥಮಿಕ ಮಾಹಿತಿ ಪ್ರಕಾರ, ಒಂದು ದುಷ್ಕರ್ಮಿಗಳ ಗುಂಪು ‘ಚರ್ಚೆ’ ನಡೆಸುವ ನೆಪದಲ್ಲಿ ನೌಫಾಲ್‌ನನ್ನು ಉಪ್ಪಳಕ್ಕೆ ಕರೆಸಿಕೊಂಡಿದ್ದು, ನಂತರ ಮಾರಣಾಂತಿಕ ಅಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ನೌಫಾಲ್ ದೇಹವು ರೈಲ್ವೆ ಹಳಿಗಳ ಸಮೀಪ ಬಿದ್ದಿತ್ತು. ಆತನ ತಲೆ ಮತ್ತು ಕತ್ತಿನ ಮೇಲೆ ಆಳವಾದ ಗಾಯಗಳು ಕಂಡುಬಂದಿವೆ. ಹಲ್ಲೆ ವೇಳೆ ಆತನ ಶರ್ಟ್ ಹರಿದು ಹೋಗಿದ್ದು, ಕೇವಲ ಬನಿಯನ್ನು ಮತ್ತು ಪ್ಯಾಂಟ್ ಮಾತ್ರ ಧರಿಸಿದ್ದ ಎನ್ನಲಾಗಿದೆ.  ಆತನ ಮೃತದೇಹವನ್ನು ಮಂಜೇಶ್ವರ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಪೆರಿಯಾರಂ ಮೆಡಿಕಲ್ ಕಾಲೇಜಿಗೆ ರವಾನಿಸಿದ್ದಾರೆ.

ಕೊಲೆ ಆರೋಪ ಸೇರಿ ಹಲವು ಕೇಸ್‌: ‘ಟೊಪ್ಪಿ’ ನೌಫಾಲ್ ಡ್ರಗ್ಸ್ ದಂಧೆ ಮತ್ತು ಮಾರಾಟದಲ್ಲಿ ಹೆಸರುವಾಸಿಯಾಗಿದ್ದ. 2017ರಲ್ಲಿ ಫರಂಗಿಪೇಟೆಯಲ್ಲಿ ನಡೆದ ಜಿಯಾ ಮತ್ತು ಇನ್ನೊಬ್ಬ ವ್ಯಕ್ತಿಯ ಜೋಡಿ ಕೊಲೆ ಪ್ರಕರಣ, ಈ ಹಿಂದೆ ಆತ ಮರಿಪಳ್ಳ ಜಬ್ಬಾರ್ ಮತ್ತು ತಳ್ಳತ್ ಗ್ಯಾಂಗ್‌ಗಳ ಜೊತೆಗೂಡಿ ಅಪರಾಧ ಕೃತ್ಯ, ತಳ್ಳತ್ ಮತ್ತು ಜಬ್ಬಾರ್ ನಿಷ್ಕ್ರಿಯಗೊಂಡ ಬಳಿಕ ನೌಫಾಲ್ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಕೊಲೆ ಯತ್ನ, ಸುಲಿಗೆ, ಡ್ರಗ್ಸ್ ಕಳ್ಳಸಾಗಣೆ, ಮತ್ತು ಅಕ್ರಮ ಚಿನ್ನದ ವ್ಯಾಪಾರದಲ್ಲಿ ಈತ ತೊಡಗಿದ್ದ ಎನ್ನಲಾಗಿದೆ.

ಕಂಕನಾಡಿ ಟೌನ್, ವಾಮಂಜೂರು, ಸುರತ್ಕಲ್ ಮತ್ತು ಕಾವೂರು ಸೇರಿದಂತೆ ಹಲವು ಠಾಣೆಗಳಲ್ಲಿ ಆತನ ವಿರುದ್ಧ ಪ್ರಕರಣಗಳಿದ್ದವು. ಸದ್ಯ ಉಪ್ಪಳದಲ್ಲಿ ನಡೆದಿರುವ ಈ ಹತ್ಯೆ, ಆತನ ಪ್ರತಿಸ್ಪರ್ಧಿ ಗ್ಯಾಂಗ್‌ಗಳ ಕೃತ್ಯ ಎಂದು ಪೊಲೀಸರು ಬಲವಾಗಿ ಶಂಕಿಸಿದ್ದು, ತನಿಖೆ ಮುಂದುವರೆದಿದೆ.