S Shorts

ನರೇಗಾ ವಿಚಾರದಲ್ಲಿ ಬಿಜೆಪಿ ಷಡ್ಯಂತ್ರ, ಲಿಂಗಾಯತ ಶಾಸಕರ ಸಭೆಯಲ್ಲಿ ತಪ್ಪೇನಿದೆ?: ಸಚಿವ ಎಂ.ಬಿ. ಪಾಟೀಲ್

ನರೇಗಾ ವಿಚಾರದಲ್ಲಿ ಬಿಜೆಪಿ ಷಡ್ಯಂತ್ರ, ಲಿಂಗಾಯತ ಶಾಸಕರ ಸಭೆಯಲ್ಲಿ ತಪ್ಪೇನಿದೆ?: ಸಚಿವ ಎಂ.ಬಿ. ಪಾಟೀಲ್
Author: Devaraj Naik
Posted By: Devaraj Naik
Updated: Feb 4, 2026 | 12:08 PM

ಬೆಂಗಳೂರು: ನರೇಗಾ (NREGA) ಯೋಜನೆಯಲ್ಲಿ ಹಗರಣ ನಡೆದಿದೆ ಎಂಬ ಪ್ರತಿಪಕ್ಷಗಳ ಆರೋಪ ಹಾಗೂ ಲಿಂಗಾಯತ ಶಾಸಕರ ಇತ್ತೀಚಿನ ಸಭೆಯ ಕುರಿತಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ರಾಜ್ಯ ಸರ್ಕಾರದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಕೆಂಗಲ್ ಗೇಟ್ ಬಳಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನರೇಗಾ ಹಗರಣದ ಆರೋಪಕ್ಕೆ ತಿರುಗೇಟು:

“ನರೇಗಾ ಯೋಜನೆಯ ಬಗ್ಗೆ ನಾವು ಸಕಾರಾತ್ಮಕವಾಗಿ ಚರ್ಚೆ ಮಾಡುತ್ತಿದ್ದೇವೆ. ಜನರ ದೃಷ್ಟಿಕೋನವನ್ನು ಬದಲಿಸಬೇಕು ಎಂಬುದು ನಮ್ಮ ಉದ್ದೇಶ. ಆದರೆ, ಬಿಜೆಪಿ ಅವರು ಈ ವಿಷಯದಲ್ಲಿ ಇಲ್ಲಸಲ್ಲದ ಷಡ್ಯಂತ್ರ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು. “ಯಾರೋ ಒಬ್ಬರು ಸಚಿವರ ಹೆಸರು ಹೇಳಿದಾಕ್ಷಣ ರಾಜೀನಾಮೆ ನೀಡಬೇಕೆ? ನಾಳೆ ಯಾರಾದರೂ ಪ್ರಧಾನಿಯವರ ಹೆಸರನ್ನು ಹೇಳಬಹುದು, ಹಾಗೆಂದು ಪ್ರಧಾನಿಯನ್ನು ಹೋಗಿ ಕೇಳಲು ಸಾಧ್ಯವೇ? ರಾಜಕೀಯದಲ್ಲಿ ಇವೆಲ್ಲ ನಡೆಯುತ್ತಿರುತ್ತದೆ. ನಿಜವಾಗಿಯೂ ಯಾರು ದುಡ್ಡು ತಿಂದಿದ್ದಾರೋ ಅವರಿಗೆ ಶಿಕ್ಷೆಯಾಗಲೇಬೇಕು” ಎಂದು ಸ್ಪಷ್ಟಪಡಿಸಿದರು.

ಲಿಂಗಾಯತ ಶಾಸಕರ ಸಭೆ ಕುರಿತು ಸ್ಪಷ್ಟನೆ:

ಲಿಂಗಾಯತ ಶಾಸಕರ ಸಭೆ ನಡೆಸಿರುವ ಕುರಿತು ಉದ್ಭವಿಸಿರುವ ಚರ್ಚೆಗಳಿಗೆ ಉತ್ತರಿಸಿದ ಅವರು, ಅದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದರು. “ಸಮುದಾಯದ ಶಾಸಕರು ಸೇರಿ ಸಭೆ ಮಾಡುವುದರಲ್ಲಿ ತಪ್ಪೇನಿದೆ? ಬೆಳಗಾವಿ ಅಧಿವೇಶನದಲ್ಲಿ ನಾವೆಲ್ಲಾ ಒಟ್ಟಾಗಿದ್ದೆವು, ಅಂದಿನಿಂದ ಯಾರೂ ಸಭೆ ಮಾಡಿರಲಿಲ್ಲ. ಸಮಾಜದ ದೃಷ್ಟಿಯಿಂದ ನಾವು ಚರ್ಚೆ ನಡೆಸಿದ್ದೇವೆ ಹೊರತು ಇದರಲ್ಲಿ ವೈಯಕ್ತಿಕ ವಿಚಾರಗಳಿಲ್ಲ.”

ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಶಾಸಕರು ಆಯ್ಕೆಯಾಗಿದ್ದಾರೆ. ಸಮುದಾಯದ ಅಧಿಕಾರಿಗಳಿಗೆ ಸೂಕ್ತ ಪೋಸ್ಟಿಂಗ್ ಸಿಗಬೇಕು ಹಾಗೂ ನಿಗಮಗಳಿಗೆ ಹೆಚ್ಚಿನ ಅನುದಾನ ಬರಬೇಕು ಎಂಬ ವಿಷಯಗಳ ಬಗ್ಗೆ ಮಾತ್ರ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ಇದೇ ವೇಳೆ ತಿಳಿಸಿದರು.