ಬೆಂಗಳೂರು: ಸಿಲಿಕಾನ್ ಸಿಟಿಯ ಸಾರ್ವಜನಿಕರ ತುರ್ತು ಸಂದರ್ಭಗಳ ಸಂಜೀವಿನಿಯಾಗಿರುವ ‘ನಮ್ಮ 112’ ಸಹಾಯವಾಣಿಯು ಕಳೆದ ನಾಲ್ಕು ವರ್ಷಗಳಲ್ಲಿ ತಂತ್ರಜ್ಞಾನ ಆಧಾರಿತವಾಗಿ ಮಹತ್ತರ ಬದಲಾವಣೆ ಕಂಡಿದೆ. 2022ರಿಂದ 2025ರವರೆಗಿನ ಈ ಪ್ರಯಾಣವು ವೇಗ, ಪಾರದರ್ಶಕತೆ ಮತ್ತು ನಾಗರಿಕರ ಸುರಕ್ಷತೆಗೆ ಹೊಸ ಆಯಾಮ ನೀಡಿದೆ.
ಸಂಖ್ಯೆಗಳಲ್ಲಿ ಸುರಕ್ಷತೆಯ ಪ್ರತಿಬಿಂಬ: 2025ನೇ ಸಾಲಿನಲ್ಲಿ ‘ನಮ್ಮ 112’ ವ್ಯವಸ್ಥೆಯು ಒಟ್ಟು 5,22,742 ಕರೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಇದು 2024ಕ್ಕೆ ಹೋಲಿಸಿದರೆ ಶೇ. 17.8ರಷ್ಟು ಏರಿಕೆಯಾಗಿದೆ. ವಿಶೇಷವೆಂದರೆ, ಸಂಕಷ್ಟದಲ್ಲಿದ್ದ 1,16,800 ಮಹಿಳೆಯರು ಈ ಸೇವೆಯನ್ನು ಬಳಸಿಕೊಂಡಿದ್ದಾರೆ. ಪೊಲೀಸರು ಘಟನಾ ಸ್ಥಳಕ್ಕೆ ತ್ವರಿತವಾಗಿ ತಲುಪಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರಿಂದ ನಗರದಲ್ಲಿ ಹಲ್ಲೆ ಪ್ರಕರಣಗಳ (Hurt cases) ಪ್ರಮಾಣವು ಶೇ. 9ರಷ್ಟು ಕುಸಿದಿದೆ.
ಬಾಡಿ ಕ್ಯಾಮೆರಾ ಮತ್ತು ಡ್ಯಾಶ್‌ಕ್ಯಾಮ್ ಕಣ್ಗಾವಲು
2023 ರಿಂದೀಚೆಗೆ ಪೊಲೀಸರ ಕಾರ್ಯವೈಖರಿಯಲ್ಲಿ ಭಾರೀ ಬದಲಾವಣೆ ತರಲಾಗಿದೆ. ಪ್ರತಿಯೊಬ್ಬ ಸಿಬ್ಬಂದಿಯ ಸಮವಸ್ತ್ರದ ಮೇಲಿರುವ ಬಾಡಿ–ವೋರ್ನ್ ಕ್ಯಾಮೆರಾಗಳು (Body-Worn Cameras) ಮತ್ತು ಹೊಯ್ಸಳ ವಾಹನಗಳಲ್ಲಿರುವ ಡ್ಯಾಶ್‌ಕ್ಯಾಮ್‌ಗಳು (Dashcams) ಘಟನೆಯ ಸ್ಥಳದ ನೈಜ ದೃಶ್ಯಗಳನ್ನು ನೇರವಾಗಿ ಕಂಟ್ರೋಲ್ ರೂಂಗೆ ರವಾನಿಸುತ್ತಿವೆ. ಇದು ಪಾರದರ್ಶಕತೆಯನ್ನು ಹೆಚ್ಚಿಸಿದ್ದಲ್ಲದೆ, ನ್ಯಾಯಾಲಯದಲ್ಲಿ ಪ್ರಬಲ ಸಾಕ್ಷ್ಯವಾಗಿಯೂ ಬಳಕೆಯಾಗುತ್ತಿದೆ. 2024 ಒಂದೇ ವರ್ಷದಲ್ಲಿ ಬರೋಬ್ಬರಿ 4.43 ಲಕ್ಷ ಕರೆಗಳನ್ನು ಸ್ವೀಕರಿಸಲಾಗಿದ್ದು, ಇದರಲ್ಲಿ 1 ಲಕ್ಷಕ್ಕೂ ಹೆಚ್ಚು ಕರೆಗಳು ಮಹಿಳೆಯರಿಂದ ಬಂದಿವೆ ಎಂಬುದು ವ್ಯವಸ್ಥೆಯ ಮೇಲಿನ ನಂಬಿಕೆಗೆ ಸಾಕ್ಷಿಯಾಗಿದೆ.
ದೂರುದಾರರಿಗೆ ಲೈವ್ ಟ್ರ್ಯಾಕಿಂಗ್ ಮತ್ತು ಗೌಪ್ಯತೆ
ಸಂಕಷ್ಟದಲ್ಲಿರುವವರು 112ಕ್ಕೆ ಕರೆ ಮಾಡಿದಾಗ, ತಮಗೆ ಸಹಾಯ ಮಾಡಲು ಬರುತ್ತಿರುವ ಹೊಯ್ಸಳ ವಾಹನ ಎಲ್ಲಿದೆ ಎಂಬುದನ್ನು ಎಸ್‌ಎಂಎಸ್ ಲಿಂಕ್ ಮೂಲಕ ನೈಜ ಸಮಯದಲ್ಲಿ (Live Tracking) ನೋಡುವ ವ್ಯವಸ್ಥೆ ಜಾರಿಯಲ್ಲಿದೆ. ಇದು ದೂರುದಾರರ ಆತಂಕ ಕಡಿಮೆ ಮಾಡಲು ಸಹಕಾರಿಯಾಗಿದೆ. ಅಲ್ಲದೆ, ‘ನಂಬರ್ ಮಾಸ್ಕಿಂಗ್‘ (Number Masking) ತಂತ್ರಜ್ಞಾನದ ಮೂಲಕ ದೂರುದಾರರ ಮೊಬೈಲ್ ಸಂಖ್ಯೆಯನ್ನು ಗೌಪ್ಯವಾಗಿಡಲಾಗುತ್ತಿದೆ. ಇದರಿಂದ ಸೇಡು ಅಥವಾ ಬೆದರಿಕೆಯ ಭಯವಿಲ್ಲದೆ ಯಾರೂ ಬೇಕಾದರೂ ದೂರು ನೀಡಬಹುದಾಗಿದೆ.
ವಿಡಿಯೋ ಕರೆ ಮತ್ತು ಓಲಾ-ಉಬರ್ ಲಿಂಕ್
ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು ‘ಸೇಫ್ ಕನೆಕ್ಟ್‘ (Safe Connect) ಮೂಲಕ ವಿಡಿಯೋ ಕರೆ ಸೌಲಭ್ಯ ಒದಗಿಸಿದ್ದಾರೆ. ಸಂತ್ರಸ್ತರು ತಾವು ಇರುವ ಪರಿಸ್ಥಿತಿಯನ್ನು ನೇರವಾಗಿ ವಿಡಿಯೋ ಮೂಲಕ ಪೊಲೀಸರಿಗೆ ತೋರಿಸಬಹುದು. ಮತ್ತೊಂದು ಮಹತ್ವದ ಬೆಳವಣಿಗೆಯೆಂದರೆ, ಓಲಾ ಮತ್ತು ಉಬರ್ ಆ್ಯಪ್‌ಗಳನ್ನೂ 112ರೊಂದಿಗೆ ಜೋಡಿಸಲಾಗಿದೆ. ಪ್ರಯಾಣಿಕರು ಪ್ರಯಾಣದ ಮಧ್ಯೆ ಯಾವುದೇ ಆತಂಕ ಎದುರಾದರೆ ನೇರವಾಗಿ ಆ್ಯಪ್ ಮೂಲಕವೇ ಪೊಲೀಸರನ್ನು ಸಂಪರ್ಕಿಸಬಹುದು. ನಗರದಾದ್ಯಂತ ಅಳವಡಿಸಲಾದ ‘ಸೇಫ್ಟಿ ಐಲ್ಯಾಂಡ್‘ (ತುರ್ತು ಕರೆ ಪೆಟ್ಟಿಗೆ) ಮೂಲಕವೂ ನೂರಾರು ಜನರಿಗೆ ನೆರವು ನೀಡಲಾಗಿದೆ.
ಬಹುಭಾಷಾ ಸೇವೆಗೆ ಸಿದ್ಧತೆ
ಮುಂದಿನ ದಿನಗಳಲ್ಲಿ ಭಾಷೆಯ ಸಮಸ್ಯೆ ನಿವಾರಿಸಲು ಬಹುಭಾಷಾ (Multilingual) ಬೆಂಬಲವನ್ನು ಪರಿಚಯಿಸಲು ಇಲಾಖೆ ಸಜ್ಜಾಗಿದೆ. ಕೇವಲ ಪೊಲೀಸ್ ಅಲ್ಲದೆ, ಅಗ್ನಿಶಾಮಕ, ವೈದ್ಯಕೀಯ ಸೇರಿದಂತೆ ಇತರ ತುರ್ತು ಸೇವೆಗಳೊಂದಿಗೂ 112 ಅನ್ನು ಸಂಯೋಜಿಸಲಾಗುತ್ತಿದೆ. ಒಟ್ಟಿನಲ್ಲಿ “ಕಾಳಜಿ, ಸಹಾನುಭೂತಿ ಮತ್ತು ಧೈರ್ಯ” ಎಂಬ ಧ್ಯೇಯವಾಕ್ಯದೊಂದಿಗೆ ಬೆಂಗಳೂರು ಪೊಲೀಸರು ಸ್ಮಾರ್ಟ್ ಸಿಟಿಗೆ ತಕ್ಕಂತೆ ಸ್ಮಾರ್ಟ್ ಪೋಲಿಸಿಂಗ್ ವ್ಯವಸ್ಥೆಯನ್ನು ಬಲಪಡಿಸಿಕೊಂಡಿದ್ದಾರೆ.
